ಆಪರೇಷನ್ ಮಂಕಿ ಸಕ್ಸಸ್: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ತುರುವೇಕೆರೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ರಾಘವೇಂದ್ರ ನಗರದಲ್ಲಿ ಕೋತಿಯೊಂದು ವಿಪರೀತ ಕಿರಿ ಕಿರಿ ಮಾಡುತ್ತಿದ್ದು ಕೊನೆಗೂ ಅದನ್ನು ಹಿಡಿದು ಜನರಿಗೆ ನೆಮ್ಮದಿ ತಂದಿದೆ. ಆ ಕೋತಿ ಕಚ್ಚಿ ಹಲವರಿಗೆ ಗಾಯ ಮಾಡಿತ್ತು. ಇದರಿಂದ ರೋಸಿ ಹೋದ ಗ್ರಾಮದ ಹಲವಾರು ಯುವಕರು ಅರಣ್ಯ ಇಲಾಖಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ಮಾಡಿ ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಚಿಕ್ಕಯ್ಯ, ಭೀಮೇಗೌಡ ಉಗ್ರಯ್ಯ ಇತರರು ಹಿಡಿಯಲು ಹರ ಸಾಹಸ ಮಾಡಿದರು. ಅಂತಿಮವಾಗಿ ಕೋತಿಗೆ ಪೂಸಿ ಮಾಡಿ ತಮ್ಮತ್ತ ಬರುವಂತೆ ಮಾಡಲು ಯಶಸ್ವಿಯಾದರು. ಕೂಡಲೇ ಗೋಣಿಚೀಲದ ಸಹಾಯದಿಂದ ಕೂಡಿ ಹಾಕಿ ಬೆಟ್ಟದ ಸಾಲಿಗೆ ಕೊಂಡೊಯ್ದು ಬಿಟ್ಟರು. ಅಲ್ಲಿಗೆ ಕೋತಿ ನೀಡುತ್ತಿದ್ದ ಕಾಟದಿಂದ ರಾಘವೇಂದ್ರ ನಗರದ ವಾಸಿಗಳು ನಿಟ್ಟುಸಿರು ಬಿಡುವಂತಾಯಿತು.
ಬ್ಯಾಂಕ್ ಪರೀಕ್ಷೆಗೆ ಉಚಿತ ಕಾರ್ಯಾಗಾರ
ತುಮಕೂರು: ಇಲ್ಲಿನ ವಿಎಸ್ಇಟಿ ವತಿಯಿಂದ ಬ್ಯಾಂಕ್ ಪರೀಕ್ಷೆಗಾಗಿ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇದೇ ತಿಂಗಳ 14 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಸಂಬಂಧ ವಿಎಸ್ಇಟಿ ವತಿಯಿಂದ ಜೂ.7,8, 14 ಮತ್ತು 15 ರಂದು ಉಚಿತ ಕಾರ್ಯಾಗಾರ ನಡೆಸಲಾಗುವುದು. ಆಸಕ್ತರು ತಮ್ಮ ಹೆಸರನ್ನು ವಿಎಸ್ಇಟಿ, ದೊಡ್ಡಮನೆ ನರ್ಸಿಂಗ್ ಹೋಂ ಹತ್ತಿರ, ಬಿ.ಎಚ್. ರಸ್ತೆ, ತುಮಕೂರು, ಫೋನ್ 98860 23459 ಸಂಪರ್ಕಿಸಬಹುದುಎಂದು ಜೆ. ಶ್ವೇತಾ ತಿಳಿಸಿದ್ದಾರೆ.