ಕನ್ನಡದಲ್ಲಿ ಪ್ರಮಾಣ ವಚನಕ್ಕೆ ಅಭಿನಂದನೆ
ಕುಣಿಗಲ್: ಲೋಕಸಭೆ ಅಧಿವೇಶನದಲ್ಲಿ ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸದಸ್ಯರುಗಳ ಪೈಕಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸದಾನಂದಗೌಡ ಸೇರಿದಂತೆ ಇತರೆ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದಕ್ಕೆ ಅಭಿನಂದನೆ ವ್ಯಕ್ತಪಡಿಸಿರುವ ತಾಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳು ಎಲ್ಲಾ ಸಂಸದರು ಪ್ರಾಥಮಿಕ ಹಂತದ ಭಾಷಾಮಾಧ್ಯಮ ಕನ್ನಡ ಭಾಷೆಯಲ್ಲೇ ಆಗಲಿ ಎಂಬುದರ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡು, ಕಾಯಿದೆ ಜಾರಿಗೆ ಬದ್ಧತೆ ತೋರಬೇಕೆಂದು ಆಗ್ರಹಿಸಿದ್ದಾರೆ.
ಮಂಜುನಾಥ್, ಅಧ್ಯಕ್ಷರು ಕರವೇ ತಾಲೂಕು ಘಟಕ, ಶ್ರೀನಿವಾಸ, ಅಧ್ಯಕ್ಷರು, ಕನ್ನಡಸೇನೆ,ತಾಲೂಕು ಘಟಕ, ಅಪ್ಪುಸೂರಿ, ಅಧ್ಯಕ್ಷರು, ಜಯಕರ್ನಾಟಕ, ತಾಲೂಕು ಘಟಕ ಸಂಸದರಿಗೆ ಅಭಿನಂದಿಸಿದ್ದಾರೆ.
ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜಯ
ಹುಳಿಯಾರು: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗಿದ್ದು 26 -0 ಮತಗಳ ಮೂಲಕ ನಿರ್ಣಯಕ್ಕೆ ಜಯ ಸಿಕ್ಕಿದೆ. ಈ ಸಂಬಂಧ ತಿಪಟೂರು ಉಪವಿಭಾಗಾಧಿಕಾರಿ ಬಿ.ಸಿಂಧು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ 26 ಮಂದಿಯು ಹಾಲಿ ಅಧ್ಯಕ್ಷೆ ವಿರುದ್ಧ ಸಹಿ ಹಾಕುವ ಮೂಲಕ ಅವಿಶ್ವಾಸ ತೋರಿಸಿದರು. ಪಂಚಾಯ್ತಿಯಲ್ಲಿ ಹಾಲಿ ಚುನಾಯಿತ ಸದಸ್ಯರ ಸಂಖ್ಯೆ 33 ಇದ್ದು ಅಧ್ಯಕ್ಷರ ವಿರುದ್ಧ 26 ಮಂದಿ ಅವಿಶ್ವಾಸ ನಿರ್ಣಯ ಮಂಡಿಸಿದರೆ, ಅಧ್ಯಕ್ಷೆ ಪುಟ್ಟಿಬಾಯಿಯೇ ತಮ್ಮ ಇನ್ನುಳಿದ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರುಗಳೊಂದಿಗೆ ಗೈರುಹಾಜರಾಗಿದ್ದು ಅಚ್ಚರಿ ಮೂಡಿಸಿತು. ಸಹಿ ಹಾಕುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು ಗೊತ್ತುವಳಿ ಅಂಗೀಕಾರವಾಗುತ್ತಿದ್ದಂತೆ ಉಪವಿಭಾಗಾಧಿಕಾರಿಗಳು ಹಾಲಿ ಅಧ್ಯಕ್ಷರ ಬಳಿ ಇರುವ ಪಂಚಾಯತ್ ದಾಖಲೆಗಳನ್ನು ತಕ್ಷಣವೇ ಕಚೇರಿಗೆ ಹಿಂಪಡೆಯಬೇಕೆಂದು ಪಿಡಿಓಗೆ ಆದೇಶಿಸಿದರು. ಪಿಎಸ್‌ಐ ಘೋರ್ಪಡೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಪಂಚಾಯತಿ ಕಾರ್ಯದರ್ಶಿ ಅಡವೀಶ್ ಕುಮಾರ್ ಕಲಾಪಗಳನ್ನು ನಿರ್ವಹಿಸಿದರು.