ಗೊಂದಲದಲ್ಲಿ ತುರುವೇಕೆರೆ ತಾಲೂಕು ಪಂಚಾಯ್ತಿ ಸಭೆ
ತುರುವೇಕೆರೆ: ತಾಲೂಕು ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಮುನಿಸಿಕೊಂಡಿರುವ ಕಾರಣ ತಾಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿಯ ಸಭೆ ಕೋರಂ ಇಲ್ಲದೆ ಮುಂದಕ್ಕೆ ಹೋಗಿತ್ತು. 2 ರಂದು ನಡೆದ ಸಾಮಾನ್ಯ ಸಭೆಗೂ ಬಹುಪಾಲು ತಾಲೂಕು ಪಂಚಾಯ್ತಿ ಸದಸ್ಯರು ಗೈರು ಹಾಜರಾದ ಕಾರಣ ಸಭೆ ಕೋರಂ ಇಲ್ಲದೇ ಮುಂದಕ್ಕೆ ಹೋಗಿ 6 ಕ್ಕೆ ಮುಂದೂಡಲಾಗಿತ್ತು.
ಆ ದಿನ ನಡೆದ ಸಭೆಗೆ ಕೆಲ ಮಹಿಳಾ ಸದಸ್ಯರ ಪತಿಯರು ಹಾಜರಾಗಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. 6 ರಂದು ಸಭೆ ಇದೆ ಎಂದು ಪುನಃ ಎಲ್ಲಾ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಯಿತು. ನಂತರದಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ವಿಧಾನ ಪರಿಷತ್‌ನ ಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದು ಸಭೆಯನ್ನು ರದ್ದು ಮಾಡಲಾಗಿದೆ ಎಂದು ತಾಲೂಕು ಪಂಚಾಯ್ತಿ ವತಿಯಿಂದ ಅಧಿಕೃತವಾಗಿ ಸದಸ್ಯರುಗಳಿಗೆ ಸೂಚನೆ ನೀಡಲಾಯಿತು.
ಈಗ 6 ರಂದು ಸಭೆ ನಡೆಸೇ ತೀರಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಸಾಮಾನ್ಯ ಸಭೆ ಕರೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪರಿಣಾಮ ಪುನಃ ಎಲ್ಲಾ ಸದಸ್ಯರಿಗೆ 6 ರಂದು ಸಾಮಾನ್ಯ ಸಭೆ ನಡೆಯಲಿದೆ ಎಂದು ಸೂಚನಾ ಪತ್ರ ನೀಡಲಾಗಿದೆ. ಗೊಂದಲದಲ್ಲಿ ಕೂಡಿರುವ ತಾಲೂಕು ಪಂಚಾಯ್ತಿ ಸದಸ್ಯರು ಒಮ್ಮೆ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು ಈಗ ಸಾಮಾನ್ಯ ಸಭೆ ಇದೆ ಎಂದು ಪುನಃ ಸಭೆಗೆ ಆಹ್ವಾನಿಸಿದ್ದಾರೆ. ಇದರಲ್ಲಿ ಯಾವುದನ್ನು ನಂಬಬೇಕು ಎಂಬ ಚಿಂತೆಯಲ್ಲಿ ಇದ್ದಾರೆ. ದಿನದಿನಕ್ಕೂ ಆದೇಶ ಬದಲಾಗುತ್ತದೆಯೇ, ಅಧಿಕಾರಿಗಳು ಸದಸ್ಯರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂಬಂಧವೇನು?: ಪದವೀಧರ ಕ್ಷೇತ್ರದ ಚುನಾವಣೆಗೂ ತಾಲೂಕು ಪಂಚಾಯ್ತಿಯ ಸದಸ್ಯರಿಗೂ ಸಂಬಂಧವೇನು?
ಪದವೀಧರರಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲಿ ನಡೆಯುವುದೇ ಇಲ್ಲ. ಆದ್ದರಿಂದ ಸಭೆ ನಡೆಸುವುದು ಸರಿ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಅವರ ಅಭಿಪ್ರಾಯವಾಗಿದೆ. ಆದರೆ ಸಭೆಯನ್ನು ಚುನಾವಣಾ ನೀತಿ ಸಂಹಿತೆಯಡಿ ರದ್ದು ಮಾಡಲಾಗಿದೆ ಎಂದು ಹೇಳುವ ಅಧಿಕಾರಿಗಳು ಈಗ ಬದಲಾಗಿದ್ದಾದರೂ ಹೇಗೆ ಎಂದು ತಾಲೂಕು ಪಂಚಾಯ್ತಿ ಸದಸ್ಯರು ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಭೆ ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರೊಂದಿಗೆ ಮನಸ್ಥಾಪಗೊಂಡಿರುವ ಬಣ ಆಗ್ರಹಿಸಿದೆ. ಶುಕ್ರವಾರ ಸಾಮಾನ್ಯ ಸಭೆ ನಡೆಯುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಈ ಜಿಜ್ಞಾಸೆಯ ನಡುವೆ ಸಭೆ ನಡೆಸೇ ತೀರಿದರೂ ಹಲವಾರು ತಾಲೂಕು ಪಂಚಾಯ್ತಿ ಸದಸ್ಯರು ಪುನಃ ಸಭೆಗೆ ಹಾಜರಾಗದೇ ಕೋರಂ ಇಲ್ಲದಂತೆ ಮಾಡುತ್ತಾರೆ ಎಂಬ ಶಂಕೆಯೂ ದಟ್ಟವಾಗಿದೆ.