ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ
ಚಿಕ್ಕನಾಯಕನಹಳ್ಳಿ: ಸಕಲ ಚರಾಚರ ಜೀವರಾಶಿಗಳಿಗಿರುವುದು ಒಂದೇ ಭೂಮಿಯಲ್ಲಿ. ನಮ್ಮ ದುರಾಸೆಗಾಗಿ ಅದನ್ನು ಕಲುಷಿತಗೊಳಿಸಿದರೆ ಜೀವಜಂತುಗಳು ಭೂಮಿಯ ಮೇಲೆ ಬದುಕುವುದು ಹೇಗೆ ಎಂದು ಪ್ರಭಾರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಆರ್. ಲೋಕೇಶಪ್ಪ ಪ್ರಶ್ನಿಸಿದರು.
ಅವರು ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಕಾನೂನು ಪ್ರಾಧಿಕಾರದ ಆದೇಶದಂತೆ ಜಿಲ್ಲಾ ಕಾನೂನು ಪ್ರಾಧಿಕಾರ, ತಾಲೂಕು ಕಾನೂನು ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಕಾಳಜಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಜಾಗೃತಿ ಮೂಡಿಸುವುದು ಅಗತ್ಯ. ಯಾವುದೇ ಜೀವಿ ಬದುಕಲು ಸುತ್ತಮುತ್ತಲ ಉತ್ತಮ ಪರಿಸರ ಅವಶ್ಯಕ. ಅದಿಲ್ಲದಿದ್ದರೆ ಜೀವಸಂಕುಲದ ಬದುಕಿಗೆ ಕುತ್ತು. ಮಳೆ, ಗಾಳಿ ಮುಂತಾದ ಪ್ರಕೃತಿದತ್ತ ಕ್ರಿಯೆಗೆ ಸೂಕ್ತ ಪರಿಸರವಿಲ್ಲದಿದ್ದರೆ, ನಮ್ಮ ಬದುಕು ದುರಂತಮಯವಾಗುತ್ತದೆ. ಇಷ್ಟಾದರೂ ಪರಿಸರದ ಮೇಲೆ ಮಾನವ ದೌರ್ಜನ್ಯ ನಿತ್ಯ ನಡೆಯುತ್ತಲೇ ಇದೆ. ಇಂದು ಒಳ್ಳೆಯ ಊಟವಿರಲಿ, ಶುದ್ಧಗಾಳಿ ಸಿಗದಂತಹ ಪರಿಸ್ಥಿತಿಯಿದೆ. ಆದ್ದರಿಂದ ನಾವು ಪರಿಸರ ಉಳಿವಿಗೆ ನಮ್ಮ ಕೈಲಾದ ಕೊಡುಗೆ ನೀಡೋಣ ಎಂದರು.
ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ, ನ್ಯಾ.ಸೋಮನಾಥ್, ವಕೀಲರ ಸಂಘದ ಅಧ್ಯಕ್ಷ ಸಿ.ಎನ್. ಕೃಷ್ಣಮೂರ್ತಿ, ಉಪಾಧ್ಯಕ್ಷ ಜ್ಞಾನಮೂರ್ತಿ, ವಕೀಲರಾದ ಬಿ.ಕೆ.ಸದಾಶಿವು, ಹಿರಿಯ ವಕೀಲರಾದ ಜಿ.ಎಸ್. ಚನ್ನಬಸಪ್ಪ, ಎಂ. ಮಹಾಲಿಂಗಪ್ಪ ಮುಂತಾದವರಿದ್ದರು. ವೈ.ಜಿ.ಲೋಕೇಶ್ ಸ್ವಾಗತಿಸಿ, ಹನುಮಂತಪ್ಪ ನಿರೂಪಿಸಿದರು.