ಭೂಮಾಪಕರ ಪರವಾನಗಿ ಅಮಾನತು
ತುಮಕೂರು: ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇರೆಗೆ ಜಿಲ್ಲೆಯ 14 ಮಂದಿ ಪರವಾನಗಿ ಭೂ ಮಾಪಕರ ಪರವಾನಗಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ತುಮಕೂರು ತಾಲೂಕಿನ ಸತೀಶ ಎಚ್.ಜಿ, ಸುರೇಶ್ ಕುಮಾರ್, ಪ್ರಭು, ಸಿದ್ದಲಿಂಗಸ್ವಾಮಿ ಜಿ.ಪಿ., ಗುಬ್ಬಿ ತಾಲೂಕಿನ ಸೌಭಾಗ್ಯ ಜಿ.ಟಿ., ಕುಣಿಗಲ್ ತಾಲೂಕಿನ ಎಚ್.ಜಿ. ಅನ್ನಪೂರ್ಣ, ಕೆ.ಎಸ್. ವೆಂಕಟೇಶಬಾಬು, ರಮೇಶ್ ಜಿ., ತಿಪಟೂರು ತಾಲೂಕಿನ ಬಿ.ಎಸ್. ವಸಂತಕುಮಾರ್, ಚಿಕ್ಕನಾಯಕನಹಳ್ಳಿ ತಾಲೂಕಿನ ಎಂ.ಎಸ್. ನಾಗರಾಜು, ಎ.ಗುರೂಜಿ, ಕೊರಟಗೆರೆ ತಾಲೂಕಿನ ಎಂ.ಲಕ್ಷ್ಮೀಮೂರ್ತಿ, ಕೆ.ಎನ್. ಸತೀಶ, ಶಿರಾ ತಾಲೂಕಿನ ಎಂ.ಸಿ. ರಾಘವೇಂದ್ರ.
ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಪ್ರಕರಣಗಳನ್ನು ಮೋಜಿಣಿ-2 ತಂತ್ರಾಂಶದಲ್ಲಿ ಪರವಾನಗಿ ಭೂ ಮಾಪಕರಿಗೆ ಹಂಚಿಕೆ ಮಾಡಲಾಗುತ್ತಿದ್ದು, ಈ ಮೇಲ್ಕಂಡ ಭೂಮಾಪಕರಿಗೆ ಹಂಚಿಕೆಯಾಗಿರುವ 11ಇ ಪ್ರಕರಣಗಳ ಅಳತೆ ಕೆಲಸ ನಿರ್ವಹಿಸಿ, ನಿಗದಿತ ಅವಧಿಯೊಳಗೆ ಕಚೇರಿಗೆ ಸಲ್ಲಿಸದೆ 30 ದಿವಸಗಳು ಹಾಗೂ 15 ದಿವಸಗಳು ಮೇಲ್ಪಟ್ಟು ಅವರಲ್ಲಿಯೇ 11 ಇ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗಲು ಹಾಗೂ ಮೋಜಿಣಿ ಕುಂಠಿತವಾಗಲು ಕಾರಣವಾದ ಹಿನ್ನಲೆಯಲ್ಲಿ ಸದರಿ ಪರವಾನಗಿ ಭೂ ಮಾಪಕರ ಪರವಾನಗಿಯನ್ನು ಜಿಲ್ಲಾಧಿಕಾರಿಗಳು ಅಮಾನತು ಗೊಳಿಸಿದ್ದಾರೆ.
ತುಮಕೂರು ತಾಲೂಕಿನಲ್ಲಿ 11 ಇ ನಕ್ಷೆ ತಯಾರು ಮಾಡುವ ಸಂಬಂಧ ಅರ್ಜಿದಾರರಿಂದ ಹಣಕ್ಕೆ ಬೇಡಿಕೆ ಇಟ್ಟಂತಹ ಎ.ಎಂ.ಶಿವರಾಮಪ್ಪ ಹಾಗೂ ಕುಣಿಗಲ್ ತಾಲೂಕಿನಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ ಪಿ.ಎಸ್. ಸತೀಶ್ ಕುಮಾರ್ ಪರವಾನಗಿಯನ್ನ ಅಮಾನತು ಗೊಳಿಸಲಾಗಿದೆ.