ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲೋಕಾ ಕಾಯ್ದೆ ತಿದ್ದುಪಡಿ ಸಲ್ಲ

Rashmi Kasaragodu
Updated On : 7 Jun 2014, 1:04 am

ತುಮಕೂರು: ರಾಜ್ಯ ಸರ್ಕಾರ ಹೊಸ ಲೋಕಾಯುಕ್ತ ಕಾಯ್ದೆ ಜಾರಿಗೆ ತರಲು ಕರಡು ತಯಾರಿ ಪೂರ್ಣಗೊಳಿಸಿದ್ದು, 9 ಜನ ಉಪ ಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ ನಡೆಸಿರುವುದು ಸರಿಯಲ್ಲ
ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ಹೆಗ್ಡೆ ತೀವ್ರ ಅಸಂತೋಷ ವ್ಯಕ್ತಪಡಿಸಿದರು.
ಅವರು ತುಮಕೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ಪದವೀಧರ ಪ್ರಮಾಣ ಪತ್ರ ವಿತರಣೆ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಾಲಿ ಇರುವ ಲೋಕಾಯುಕ್ತ ಸಂಸ್ಥೆ ಬಲಿಷ್ಠವಾಗಿದೆ. ಹಾಲಿ ಕಾಯಿದೆಯಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರವಿದೆ. ಜನಸಾಮಾನ್ಯರಿಗೆ ಸ್ಪಂದಿಸುವ, ಆಡಳಿತ ಸಮಸ್ಯೆಗೆ ಹರಿಹಾರ ಕಂಡು ಹಿಡಿಯುವ ಅವಕಾಶವೂ ಇದೆ. ಆದರೆ ಹೊಸ ಲೋಕಾಯುಕ್ತ ಕಾಯ್ದೆಯಲ್ಲಿ ಇವ್ಯಾವುದಕ್ಕೂ ಅವಕಾಶವಿಲ್ಲ ಎಂದು ವಿಷಾದಿಸಿದರು.
ಮೊದಲೇ ಸಿದ್ಧತೆ ನಡೆದಿತ್ತು: ಲೋಕಸಭಾ ಚುನಾವಣೆಗೂ ಮುನ್ನವೇ ಹೊಸ ಕಾಯ್ದೆ ಜಾರಿಗೆ ಸಿದ್ಧತೆ ನಡೆದಿತ್ತು. ಆದರೆ ಜಾರಿಗೊಳಿಸಲು ಆಗಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಹೊಸ ಕಾಯ್ದೆ ಜಾರಿ ಮುಂದಕ್ಕೆ ಹೋಗಿತ್ತು. ಹೊಸ ಲೋಕಾಯುಕ್ತ ಕರಡು ಕೇವಲ ಭ್ರಷ್ಟಾಚಾರವನ್ನಷ್ಟೆ ಕೇಂದ್ರೀಕರಿಸಿ ರೂಪಿಸಲಾಗಿದೆ. ಆದರೆ ಜನ ಸಾಮಾನ್ಯರ ದೂರು-ದುಮ್ಮಾನಗಳಿಗೆ ಪರಿಹಾರ ಕಂಡು ಹಿಡಿಯುವ ಕುರಿತಂತೆ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದ ಹೆಗ್ಡೆ ಅವರು, ತಮ್ಮ ಲೋಕಾಯುಕ್ತ ಅವಧಿಯಲ್ಲಿ 24 ಸಾವಿರ ಕೇಸ್ಗಳು ದಾಖಲಾಗಿದ್ದವು. 700 ಚಿಲ್ಲರೆ ದಾಳಿ ನಡೆಸಲಾಗಿತ್ತು ಎಂದು ತಿಳಿಸಿದರು.
ಹಾಲಿ ಕಾಯ್ದೆಯೇ ಬಲಿಷ್ಠ:  ಹಾಲಿ ಇರುವ ಕರ್ನಾಟಕ ಲೋಕಾಯುಕ್ತ ಕಾಯ್ದೆ ಭಾರತದ ಇತರೆ ಕಾಯಿದೆಗಳಿಗಿಂತ ಬಲಿಷ್ಠವಾಗಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿರುವುದರಿಂದ ಸರ್ಕಾರಕ್ಕೆ ದಿಗಿಲಾಗಿದೆ. ಸಂಸ್ಥೆ ಬಲಿಷ್ಠಗೊಳಿಸಲು,ಲೋಪ ದೋಷಗಳ ಸರಿಪಡಿಸಲು ಕೆಲ ತಿದ್ದುಪಡಿಗಳ ಅಗತ್ಯವಿದೆ. ಈ ಕುರಿತು ತಾವು 2008 ರಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚೆಯಾಗಬೇಕು: ಹೊಸ ಲೋಕಾಯುಕ್ತ ಕಾಯ್ದೆ ಜಾರಿಗೊಳಿಸುವ ಮುನ್ನ ಸಾರ್ವಜನಿಕವಾಗಿ ಎಲ್ಲ ಹಂತದಲ್ಲೂ ಚರ್ಚೆಯಾಗಬೇಕು. ಸಾಧಕ-ಭಾದಕಗಳ ಕುರಿತಂತೆ ಜನತೆಗೆ ಮನವರಿಕೆ ಮಾಡಿಕೊಡಬೇಕು. ಆದರೆ ಇದ್ಯಾವುದನ್ನೂ ಮಾಡದ ಸರ್ಕಾರ ಏಕಾಏಕಿ ಹೊಸ ಲೋಕಾಯುಕ್ತ ಕಾಯ್ದೆ ಕರಡು ಸಿದ್ದಪಡಿಸಿ, ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿದೆ. ಇದು ಸರಿಯಲ್ಲ ಎಂದು ಸಂತೋಷ್ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾವು ಲೋಕಾಯುಕ್ತರಾಗಿದ್ದ ವೇಳೆ ಒಬ್ಬ ಉಪ ಲೋಕಾಯುಕ್ತರಿದ್ದರು. ಈಗ 9 ಜನ ಉಪ ಲೋಕಾಯುಕ್ತರನ್ನು ನೇಮಿಸಲು ಹೊರಟಿರುವುದು ಅಸಮಂಜಸವಷ್ಟೆ ಅಲ್ಲ. ಆರ್ಥಿಕ ದೃಷ್ಟಿಯಿಂದಲೂ, ಕರ್ತವ್ಯ ನಿರ್ವಹಣೆ ದೃಷ್ಟಿಯಿಂದಲೂ ಸ್ವಲ್ಪವೂ ಸರಿಯಲ್ಲ ಎಂದರು.
ಹೊಸ ಕಾಯ್ದೆ ಜಾರಿಯಾದರೆ, ಮುಖ್ಯ ಲೋಕಾಯುಕ್ತರು ಯಾವುದೇ ತೀರ್ಮಾನ ತೆಗೆದುಕೊಳ್ಳವ ಮುನ್ನ, ಸಚಿವರು, ಸಿಎಂ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು 9 ಜನ ಉಪ ಲೋಕಾಯುಕ್ತರಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವುದು ಕಡ್ಡಾಯ.
ಇದನ್ನೆಲ್ಲಾ ನೋಡಿದರೆ ಹಾಲಿ ಲೋಕಾಯುಕ್ತರ ಅಧಿಕಾರ ವ್ಯಾಪ್ತಿ ಮೊಟಕುಗೊಳಿಸಿ, 9 ಜನ ಉಪ ಲೋಕಾಯುಕ್ತರನ್ನು ನೇಮಿಸಲು ಸರ್ಕಾರ ತರಾತುರಿಯಲ್ಲಿ ಸಿದ್ಧತೆ ನಡೆಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಹೀಗೆಲ್ಲಾ ಗುಪ್ತ ಅಜೆಂಡಾ ಇಟ್ಟುಕೊಂಡು, ಸಾರ್ವಜನಿಕ ವಿರೋಧಿ ಕೆಲಸ ಮಾಡುವದರ ಬದಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚುವುದು ಒಳಿತು ಎಂದು ಮಾರ್ಮಿಕವಾಗಿ ನುಡಿದರು.
ಸುಪ್ರಿಂ ತೀರ್ಪು ಗೌರವಿಸಬೇಕು: ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಆದರೆ ಕರ್ನಾಟಕ ಸರ್ಕಾರಕ್ಕೆ ರಿವ್ಯೂ ಪಿಟಿಷನ್ ಹಾಕಲು ಅವಕಾಶವಿದೆ. ಶೀಘ್ರದಲ್ಲೇ ದೆಹಲಿಯಲ್ಲಿ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ ಎಂದರು.
ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಬೇಕಾಬಿಟ್ಟಿ ವರ್ತಿಸಿದರೆ ಸಂಸ್ಥೆ, ಸರ್ಕಾರದ ಗೌರವದ ಕಡಿಮೆಯಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ತಾವು ಆಮ್ ಆದ್ಮಿ ಪಕ್ಷದ ಹಿತೈಷಿಯಲ್ಲ. ಆದರೆ ಅಣ್ಣಾ ಹಜಾರೆ, ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಅವರೊಡನೆ ಭಾಗಿಯಾಗಿದ್ದೆ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾವೀಗ ನಿವೃತ್ತರಾಗಿದ್ದು, ಸಂತೋಷವಾಗಿದ್ದೇನೆ. ಕೇಂದ್ರದಲ್ಲಿ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement