ಎ.ಎಚ್. ಶಿವಯೋಗಿಸ್ವಾವು ಬೆಂಬಲಿಸಲು ಜಿಎಸ್‌ಬಿ ಕರೆ
ಕ.ಪ್ರ.ವಾರ್ತೆ, ತುಮಕೂರು, ಜೂ.7
ಮುತ್ಸದ್ದಿ ರಾಜಕಾರಣಿ, ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಎ.ಎಚ್. ಶಿವಯೋಗಿಸ್ವಾವು ಅವರನ್ನು ಬೆಂಬಲಿಸುವಂತೆ ಮಾಜಿ ಸಂಸದ, ಬಿಜೆಪಿ ಮುಖಂಡ ಜಿ.ಎಸ್. ಬಸವರಾಜು ಮನವಿ ಮಾಡಿದರು.
ಅವರು ತುಮಕೂರಿನ ತಮ್ಮ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶಿವಯೋಗಿಸ್ವಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರನ್ನು ಮತ್ತೆ ಗೆಲ್ಲಿಸುವಂತೆ ಜಿಎಸ್‌ಬಿ ಕರೆ ನೀಡಿದರು.
ಸಾಮಾನ್ಯ ಚುನಾವಣೆಗೂ, ಪದವೀಧರರ ಕ್ಷೇತ್ರದ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಜ್ಞಾವಂತ ಮತದಾರರೇ ಮತದಾನ ಮಾಡುವುದರಿಂದ ಇಲ್ಲಿ ಯಾವುದೇ ಅಲೆ ಕೆಲಸ ಮಾಡದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತನಿಖೆ ಸಾಧ್ಯ: ತುಮಕೂರು ವಿವಿಯಲ್ಲಿ ಈ ಹಿಂದೆ ನಡೆದ ಅದ್ವಾನಗಳಿಗೆ ಸಂಬಂಧಿಸಿದಂತೆ ಡಾ. ಶಿವಯೋಗಿಸ್ವಾವು ಧನಿ ಎತ್ತದೇ ಇರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾಜಿ ಸಂಸದರು ನಿರುತ್ತರರಾದರು.
ಹಾಲಿ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ನಿರ್ಗಮಿಸಿದ ನಂತರ ತುಮಕೂರು ವಿವಿ ಅದ್ವಾನಗಳಿಗೆ ಏನಾದರೂ ಪರಿಹಾರ ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯಪಾಲ ಭಾರದ್ವಾಜ್ ನಿರ್ಗಮನದ ನಂತರ ತುಮಕೂರು ವಿವಿ ಅದ್ವಾನಗಳಿಗೆ ಸಂಬಂಧಿಸಿದಂತೆ ತನಿಖಾ ಆಯೋಗ ರಚಿಸಲು ಸಾಧ್ಯವಾಗಬಹುದು ಎಂದರು.
ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 28 ಸಾವಿರ ಪದವೀಧರ ಮತದಾರರಿದ್ದರೂ, ಏಕೆ ಸ್ಥಳೀಯ ಅಭ್ಯರ್ಥಿಯನ್ನು ಹಾಕಿಲ್ಲ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಮಾಜಿ ಸಂಸದರಿಂದ ಬರಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಹೆಬ್ಬಾಕ ರವಿ, ಕೊಪ್ಪಳ್ ನಾಗರಾಜ್, ಡಾ. ಜಯರಾಮರಾವ್, ಬ್ಯಾಟರಂಗೇಗೌಡ, ರಂಗಾನಾಯಕ್ ಸೇರಿದಂತೆ ಬಿಜೆಪಿ ಇತರ ಮುಖಂಡರು ಪಾಲ್ಗೊಂಡಿದ್ದರು.
ವಿನೂತನ, ವಿಶಿಷ್ಟ ರೀತಿಯಲ್ಲಿ ದಾಖಲಾತಿ
ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಸಿಂಗನಹಳ್ಳಿ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಅಡವಿನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2014-15ನೇ ಸಾಲಿಗೆ ಒಂದನೇ ತರಗತಿಗೆ ಮಕ್ಕಳನ್ನು ವಿನೂತನ ಮತ್ತು ವಿಶಿಷ್ಟ ರೀತಿಯಲ್ಲಿ ದಾಖಲಾತಿ ಮಾಡಿಕೊಳ್ಳುವ ಮೂಲಕ ಶಿಕ್ಷಕರು ಜನ ಮೆಚ್ಚುಗೆಗೆ ಪಾತ್ರವಾದರು.
ಈ ಶಾಲೆ ಪ್ರತಿ ವರ್ಷ ಪೋಷಕರು ಮತ್ತು ಮಕ್ಕಳನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ವಿಶಿಷ್ಟತೆ ಮೆರದಿದೆ. ಈ ಸಲ ಹೊಸ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಓಂಕಾರ ಅಭ್ಯಾಸ ಮಾಡಿಸಿದರು.