ವಿದ್ಯಾರ್ಥಿಗಳ ಕೇಸು ವಾಪಸ್
ತುಮಕೂರು: ವಿಶ್ರಾಂತ ಕುಲಪತಿ ಎಸ್.ಸಿ. ಶರ್ಮಾ ಅವರ ಕಾಲದಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಕಡಿತ ಮಾಡಿದ್ದನ್ನು ವಿರೋಧಿಸಿ ಸರಣಿ ಪ್ರತಿಭಟನೆ ನಡೆಸಿದ ಮೇಲೆ ವಿದ್ಯಾರ್ಥಿಗಳ ಮೇಲೆ ಹಾಕಲಾಗಿದ್ದ ಎಲ್ಲಾ ಕೇಸುಗಳನ್ನು ತುಮಕೂರು ವಿವಿ ವಾಪಸ್ ಪಡೆದಿದೆ. ವಿದ್ಯಾರ್ಥಿಗಳ ಮೇಲೆ ಹಾಕಲಾಗಿದ್ದ ಕೇಸು ವಾಪಸ್ ತೆಗೆದುಕೊಳ್ಳುವ ಭರವಸೆಯನ್ನು ಹಾಲಿ ಕುಲಪತಿ ಪ್ರೊ. ರಾಜಾಸಾಬ್ ನೀಡಿದ್ದರು. ಅದರಂತೆ ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿಗಳ ಕೇಸು ವಾಪಸ್ ಪಡೆಯುವ ಬಗ್ಗೆ ನಿರ್ಣಯ ಕೈಗೊಂಡು ಅದನ್ನು ಸರ್ಕಾರ ಕಳುಹಿಸಲಾಗಿದೆ ಎಂದು ಕುಲಪತಿ ಪ್ರೊ. ರಾಜಾಸಾಬ್ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಈ ವಿಷಯವನ್ನು ಸಚಿವ ಸಂಪುಟದಲ್ಲಿ ಇಟ್ಟು ಅಂತಿಮವಾಗಿ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಕೇಸುಗಳನ್ನು ಖುಲಾಸೆ ಮಾಡಲಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕ ಹಾದಿಯನ್ನು ಸುಗಮ ಗೊಳಿಸಲು ಅವರ ಮೇಲಿದ್ದ ಕೇಸುಗಳನ್ನು ವಾಪಸ್ ಪಡೆವ ನಿರ್ಧಾರಕ್ಕೆ ಬಂದಿರುವುದಾಗಿ ಕುಲಪತಿ ಪ್ರೊ. ರಾಜಾಸಾಬ್ ತಿಳಿಸಿದ್ದಾರೆ.
ಸರಕು ವಾಹನಗಳಿಗೆ ವಿನಾಯಿತಿ ನೀಡಿ
ತುಮಕೂರು: ತುಮಕೂರು ಬೆಂಗಳೂರು ನಡುವಿನ ಜಾಸ್ ಟೋಲ್ನಲ್ಲಿ ಸ್ಥಳೀಯ ಸರಕು ವಾಹನಗಳಿಗೆ ವಿನಾಯಿತಿ ನೀಡುವಂತೆ ಜಿಲ್ಲಾ ಲಾರಿ ಮಾಲಿಕರ ಸಂಘ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರಿಗೆ ಮನವಿ ಸಲ್ಲಿಸಿದೆ. ಬೆಂಗಳೂರಿಗೆ ದಿನ ನಿತ್ಯ ಅಕ್ಕಿ, ಬತ್ತ ಸೇರಿದಂತೆ ಇನ್ನಿತರೆ ಸರಕುಗಳು ಲಾರಿ ಮೂಲಕ ಸಾಗಾಟ ಮಾಡಲಾಗುತ್ತಿದೆ. ಆದರೆ ಬೆಂಗಳೂರು ತುಮಕೂರು ನಡುವೆ ಚತುಷ್ಪಥ ರಸ್ತೆ ಅಭಿವೃದ್ಧಿಪಡಿಸಿದ ಸಂದರ್ಭದಲ್ಲಿ ಮೊದಲು ಇದ್ದ ಸರ್ವಿಸ್ ರಸ್ತೆಯನ್ನು ಚತುಷ್ಪದ ರಸ್ತೆಗೆ ವಿಲೀನಗೊಳಿಸಿದ್ದರಿಂದ ಸರ್ವೀಸ್ ರಸ್ತೆ ಇಲ್ಲದ ಪ್ರಯುಕ್ತ ಪ್ರತಿಯೊಬ್ಬರೂ ಮುಖ್ಯ ರಸ್ತೆಯಲ್ಲಿ ಸುಂಕ ನೀಡಿ ಸಂಚರಿಸುವುದು ಅನಿವಾರ್ಯವಾಗಿದೆ. ಇದನ್ನು ಸಂಘ ಮೊದಲಿನಿಂದ ವಿರೋಧಿಸಿತ್ತು. ಇತ್ತೀಚೆಗೆ ಸರ್ಕಾರ ದಿನ ನಿತ್ಯ ಸಂಚರಿಸುವ ವಾಹನಗಳಿಗೆ ರಿಯಾಯಿತಿ ಪಾಸ್ ನೀಡುವುದಾಗಿ ತಿಳಿದು ಬಂದಿದ್ದು ಈ ಸೌಲಭ್ಯವನ್ನು ಸಂಘದ ಸದಸ್ಯರ ವಾಹನಗಳಿಗೂ ವಿಸ್ತರಿಸಿಕೊಡಲು ರಿಯಾಯಿತಿ ಪಾಸ್ ನೀಡುವಂತೆ ಅಧ್ಯಕ್ಷ ಜಿ.ಎಚ್. ಪರಮಶಿವಯ್ಯ ಹಾಗೂ ಉಪಾಧ್ಯಕ್ಷ ಅಶೋಕ ಕುಮಾರ್ ಜೈನ್, ಟಿ.ಆರ್. ಸದಾಶಿವಯ್ಯ ಮನವಿ ಮಾಡಿದ್ದಾರೆ.