ಶ್ರಮ ಶಕ್ತಿ ಯೋಜನೆಯಡಿ ಸಾಲ ವಿತರಣೆ
ತುರುವೇಕೆರೆ: ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದ ವತಿಯಿಂದ ತಾಲೂಕಿನ ವಿವಿಧ ಸಂಘಗಳಿಗೆ ಹಾಗೂ ವೈಯಕ್ತಿಕ ಸಾಲವನ್ನು ವಿತರಣೆ ಮಾಡಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ಸಾಂಕೇತಿಕವಾಗಿ 13 ಮಂದಿಗೆ ಶ್ರಮ ಶಕ್ತಿ ಯೋಜನೆಯಡಿ ವೈಯಕ್ತಿಕ ಸಾಲವಾಗಿ ತಲಾ 20 ಸಾವಿರ ರು. ಹಾಗೂ ಬಾಣಸಂದ್ರದ ಬಿಸ್ಮಿಲ್ಲಾ ಸ್ತ್ರೀಶಕ್ತಿ ಸಂಘಕ್ಕೆ 1.30 ಲಕ್ಷ ರು., ಬೀಚನಹಳ್ಳಿಯ ಶ್ರೀ ಲಕ್ಷ್ಮಿ ಸ್ತ್ರೀಶಕ್ತಿ ಸಂಘಕ್ಕೆ 1.40 ಲಕ್ಷ ರು. ಚೆಕ್ ಅನ್ನು ವಿತರಣೆ ಮಾಡಿದರು. ತಾಲೂಕಿನ 32 ಸದಸ್ಯರಿಗೆ 6.40 ಲಕ್ಷ ರು.ಗಳನ್ನು, 4 ಸ್ವಸಹಾಯ ಸಂಘಗಳಿಗೆ ಮೈಕ್ರೋಡೀಡ್ ಯೋಜನೆಯಡಿ 69 ಸದಸ್ಯರಿಗೆ 6.40 ಲಕ್ಷ ರು.ಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ಸಯ್ಯದ್ ಅಬುಕಲಾಂ ತಿಳಿಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಜೆಡಿಎಸ್ ಮುಖಂಡ ಜಫ್ರುಲ್ಲಾ ಖಾನ್ ಮೊದಲಾದವರು ಇದ್ದರು.
ಪದವೀಧರರ ಸಮಸ್ಯೆ ಬಗೆಹರಿಸಲು ಆದ್ಯತೆ
ಕ.ಪ್ರ.ವಾರ್ತೆ, ತುಮಕೂರು, ಜೂ.7
ಪದವೀಧರರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವೀಧರರ ಸಂಖ್ಯೆಯೂ ಹೆಚ್ಚಿದೆ. ಸಮಸ್ಯೆಗಳೂ ಹೆಚ್ಚಿವೆ. ಆದ್ಯತೆ ಮೇಲೆ ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಚಿವರು ತಿಳಿಸಿದರು. ಪದವೀಧರರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಸಚಿವರು, ಸಮಸ್ಯೆ ಬಗೆಹರಿಸಲು ಅವಕಾಶವಿದೆ. ತುಮಕೂರಿನಂತಹ ನಗರದಲ್ಲಿ ಕೈಗಾರಿಕಾ ಕಾರಿಡಾರ್‌ಗಳಾಗುತ್ತಿವೆ. ಉದ್ಯೋಗ ಸೃಷ್ಟಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಬ್ಯಾಕ್‌ಲಾಗ್ ಹುದ್ದೆ ತುಂಬುತ್ತಿದೆ. ರಾಜ್ಯದಲ್ಲಿ ಹೊಸ ರಕ್ತ, ಹೊಸ ಶಕ್ತಿ ತುಂಬುತ್ತಿದ್ದೇವೆ. ಸದ್ಯ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಲು ಆರ್ಥಿಕ ಸಮಸ್ಯೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನೋಂದಣಿ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ಮುರುಗೇಂದ್ಪಪ್ಪ ಮಾತನಾಡಿ, ಕ್ಷೇತ್ರದ ಅರಿವು ಮೂಡಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. 17 ಸಾವಿರಕ್ಕಿಂತಲೂ ಹೆಚ್ಚು ಪದವೀಧರರನ್ನು ನೋಂದಣಿ ಮಾಡಿಸಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಲವಿಲ್ಲ ಎಂಬ ಆರೋಪವಿದೆ. ಆದರೆ ಈ ಬಾರಿ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿದೆ. ನಿರುದ್ಯೋಗಿ ಪದವೀಧರರ ಸಮಸ್ಯೆ ಬಗೆಹರಿಸುವ, ಅವರಿಗೆ ಆರ್ಥಿಕವಾಗಿ ಬಲ ತುಂಬುವ ನಿಟ್ಟಿಲ್ಲಿ ಸಹಕಾರಿ ಸಂಸ್ಥೆ ಸ್ಥಾಪಿಸುವ ಉದ್ದೇಶವೂ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಜಿಪಂ ಸದಸ್ಯ ಕೆಂಚಮಾರಯ್ಯ, ವಕ್ತಾರ ಜಕಣಾಚಾರ್, ರಾಜ್ಯ ವಕೀಲರ ವಿಭಾಗದ ಟಿ.ಎಸ್. ನಿರಂಜನ್, ತು.ಬಿ. ಮಲ್ಲೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಇತರರು ಉಪಸ್ಥಿತರಿದ್ದರು.