ಬದಲೀ ರಸ್ತೆಗೆ ಡಾಂಬರು ಹಾಕಿ
ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿ ಹೇಮಾವತಿ ಮುಖ್ಯಕಾಲುವೆ ಕಾಮಗಾರಿಗೆ ಬದಲೀ ರಸ್ತೆ ಕಲ್ಪಿಸಲಾಗಿದ್ದು, ಸದರಿ ರಸ್ತೆಯಲ್ಲಿ ಹಳ್ಳಗಳು ಹೆಚ್ಚಾಗಿ ವಾಹನ ಸವಾರರು ಪರದಾಡುವಂತಾಗಿದೆ. ಬದಲೀ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಹೇಮಾವತಿ ಮುಖ್ಯ ನಾಲೆಯ ಕಾಮಗಾರಿ ರಾಜ್ಯ ಹೆದ್ದಾರಿ-33 ತುಮಕೂರು - ಮದ್ದೂರು -ಮೈಸೂರು ಕಡೆಗೆ ಸಂಪರ್ಕ ಬೆಳೆಸುವ ಪ್ರಮುಖ ರಸ್ತೆಯಾಗಿದೆ. ದಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸದರಿ ರಸ್ತೆಯಲ್ಲೆ ಗವಿಮಠ ಗ್ರಾಮದ ಸಮೀಪ ಕಾಮಗಾರಿ ನಡೆಯುತ್ತಿರುವ ಕಾರಣ ಬದಲೀ ರಸ್ತೆ ನಿರ್ಮಿಸಿದ್ದು, ಬದಲೀ ರಸ್ತೆಗೆ ನಿಯಮಾನುಸಾರ ಡಾಂಬರು ಹಾಕಿ, ಸುಸ್ಥಿತಿಯಲ್ಲಿಡ ಬೇಕಾಗಿದೆ. ಆದರೆ, ನಾಲಾ ಕಾಮಗಾರಿ ಭರದಲ್ಲಿ ಬದಲೀ ರಸ್ತೆಗೆ ಕೇವಲ ಮಣ್ಣು ಹಾಕಿ ಬಿಟ್ಟಿರುವ ಕಾರಣ, ರಸ್ತೆಯೆಲ್ಲಾ ಹಳ್ಳಗಳಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನು ಕಾಮಗಾರಿ ಸ್ಥಳದ ಸಮೀಪ ಅಳವಡಿಸಿರುವ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿ ಹಾಕಿರುವ ಕಾರಣ ಕೆಲ ವಾಹನಗಳಿಗೆ ತಾಗಿ ವಾಹನ ಜಖಂಗೊಳ್ಳುವಂತಾಗಿದೆ. ರಸ್ತೆ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬದಲೀ ರಸ್ತೆಯ ಸುಸ್ಥಿತಿಗೆ ಮತ್ತು ಅವೈಜ್ಞಾನಿಕವಾಗಿ ಹಾಕಿರುವ ರಸ್ತೆಉಬ್ಬುಗಳ ಸರಿಪಡಿಸಲು ಅಗತ್ಯ ಕ್ರಮ ಕೈಗೊಂಡು ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಕುಣಿಗಲ್ ನಾಗರಿಕರು