ಬಾಂಬ್ ತಯಾರಿಸುವ ಹಣ ಪರಿಸರ ರಕ್ಷಣೆಗೆ ಬಳಸಿ
ತುಮಕೂರು: ಅಣು ಬಾಂಬ್ ತಯಾರಿಕೆಗೆ ಬಳಕೆಯಾಗುವ ಹಣವನ್ನು ಪರಿಸರ ಕಾಪಾಡಲು, ಮರ-ಗಿಡಗಳನ್ನು ಬೆಳೆಸಲು ಉಪಯೋಗಿಸಬೇಕಿದೆ. ಈ ಮೂಲಕ ವಿನಾಶದತ್ತ ಸಾಗುತ್ತಿರುವ ಭೂಗ್ರಹವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ರಾಜ್ಯ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಪ್ರತಿಪಾದಿಸಿದರು.
ಅವರು ತುಮಕೂರು ಸಮೀಪದ ಬುಕ್ಕಪಟ್ಟಣದಲ್ಲಿ ಅಖಿಲ ಭಾರತ ಯುವಜನ ಫೆಡರೇಷನ್ ಘಟಕ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡ ಹಾಗೂ ಇತರೆ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಗಾಗಲೇ ಜಪಾನ್ನ ಹಿರೋಷಿಮಾ, ನಾಗಸಾಕಿ ನಗರಗಳು ಅಣುಬಾಂಬ್ ಸ್ಫೋಟಕ್ಕೆ ಕಣ್ಣೆದುರಿನ ಉದಾಹರಣೆಗಳು. ಒಂದೇ ಒಂದು ಬಾರಿ ಇಡೀ ಜಗತ್ತಿನ ಮೇಲೆ ಅಣುಬಾಂಬ್ ಪ್ರಯೋಗ ನಡೆದರೂ ಸುಟ್ಟು ಭಸ್ಮವಾಗಲಿದ್ದೇವೆ. ನಾಗರಿಕತೆ ನಾಶ ಬೆರಳ ತುದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊದಲ ಯುವಜನ ಸಂಘಟನೆ: ದೇಶದ ಮೊದಲ ಯುವಜನ ಸಂಘಟನೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್). ನಾನು ಕೂಡಾ ಈ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಹಳೆಯ ಯುವಜನ ಸಂಘಟನೆ ಬುಕ್ಕಪಟ್ಟಣದಲ್ಲಿ ಶಾಖೆ ತೆರೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಎಐಟಿಯೂಸಿ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಮಾತನಾಡಿ, ಇಂದು ರಾಜಕಾರಣ ಲಾಭ-ನಷ್ಟದ ಲೆಕ್ಕದಲ್ಲಿದೆ. ಇತಿಹಾಸ ಕೆದಕಿದರೆ ದೇಶದ ದುಸ್ಥಿತಿಗೆ ಯಾರು ಹೊಣೆ ಎಂಬುದು ಗೊತ್ತಾಗುತ್ತದೆ. ಭ್ರಷ್ಟರನ್ನು ಮೆರೆಸುತ್ತಿದ್ದೇವೆ. ತಪ್ಪಿತಸ್ಥರನ್ನು ಕ್ಷಮಿಸುತ್ತಿದ್ದೇವೆ. ಅನ್ಯಾಯ-ಅಕ್ರಮಗಳನ್ನು ಮರೆಯುತ್ತಿದ್ದೇವೆ. ದೇಶದ ಮೊಟ್ಟ ಮೊದಲ ಯುವಜನತೆಯ ಸಂಘವಾಗಿರುವ ಎಐವೈಎಫ್ ಜನ-ಜಾಗೃತಿ ಈಗಾಗಲೇ ಜನಜಾಗೃತಿಗೆ ಮುಂದಾಗಿದ್ದು, ಮತ್ತಷ್ಟು ಕ್ರಿಯಾಶೀಲವಾಗಲಿ ಎಂದು ಹಾರೈಸಿದರು. ಎಐವೈಎಫ್ ರಾಜ್ಯ ಉಪಾಧ್ಯಕ್ಷ ವಾಸುದೇವ್ ಮಾತನಾಡಿ, ಎಲ್ಲ ವಿಧದ ಸಮಸ್ಯೆಗಳನ್ನು ಕೇಂದ್ರೀಕರಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಮಂಜುನಾಥ್, ಶಶಿಕಾಂತ್ ಇತರರು ಉಪಸ್ಥಿತರಿದ್ದರು.