ಲಾಠಿ ಹಿಡಿವ ಕೈಗಳು ಗುದ್ದಲಿ ಹಿಡಿದವು!
ಕುಣಿಗಲ್: ಲಾಠಿ ಹಿಡಿಯುವ ಕೈಯಲ್ಲಿ ಗುದ್ದಲಿ ಹಿಡಿದು ಗಿಡ ನೆಡುವ ಮೂಲಕ ಕುಣಿಗಲ್ ಪೊಲೀಸರು ಪರಿಸರ ಕಾಳಜಿ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಶನಿವಾರ ಡಿವೈಎಸ್ಪಿ ಗಣೇಶ್ ನೇತೃತ್ವದಲ್ಲಿ ಕುಣಿಗಲ್ ಠಾಣೆಯ ಸಿಬ್ಬಂದಿ ವಸತಿಗೃಹ, ಶಾಲಾ ಮೈದಾನ ಹಾಗೂ ಪಟ್ಟಣದ ಮಾವಿನಕಟ್ಟೆ ಪಾಳ್ಯದ ಇಲಾಖೆ ವಸತಿ ಗೃಹ ನಿವೇಶನದಲ್ಲಿ ನೂರಾರು ಗಿಡಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡು ಸಸಿಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತರು. ಮತ್ತೆ ಕೆಲವರು ನೆಟ್ಟಿರುವ ಸಸಿಗಳ ದತ್ತು ಪಡೆದು ಪೋಷಿಸುವ ಹೊಣೆ ಹೊತ್ತು ಪರಿಸರ ಕಾಳಜಿ ಮೆರೆದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿವೈಎಸ್ಪಿ ಗಣೇಶ್, ಎಲ್ಲಾ ಧರ್ಮಗಳೂ ಪ್ರಕೃತಿಯಲ್ಲಿ ಭಗವಂತನನ್ನು ಕಾಣುವುದಾಗಿ ಸಾರಿವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾದ್ದು ನಮ್ಮೆಲ್ಲರ ಆದ್ಯೆ ಕರ್ತವ್ಯವಾಗಬೇಕಿದೆ ಎಂದರು.
ವೃತ್ತ ನಿರೀಕ್ಷಕ ಧರ್ಮೇಂದ್ರ, ಎಎಸೈ ಗಳಾದ ಗಂಗಾಧರ, ಕುಮಾರಿ, ಸಿಬ್ಬಂದಿಯಾದ ಸುರೇಶ್, ಪ್ರವೀಣ್, ಕಲ್ಲಣ್ಣ, ವರ್ತಕರ ಪತ್ತಿನ ಸಂಘದ ಅಧ್ಯಕ್ಷ ಎಸ್ಟಿಡಿ ಶ್ರೀನಿವಾಸ್ ಇದ್ದರು.
ಜಾತ್ರಾ ಮಹೋತ್ಸವ ಇಂದಿನಿಂದ
ತುಮಕೂರು: ತಾಲೂಕಿನ ಕೋರಾ ಹೋಬಳಿ ಮುದ್ದೇನಹಳ್ಳಿ ಗ್ರಾಮದಲ್ಲಿ ಜೂ.9 ರಿಂದ 11 ರವರೆಗೆ ಶ್ರೀ ಕಾಳಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಜಾತತ್ರೆ ಅಂಗವಾಗಿ 9 ರಂದು ಶ್ರೀ ಮಲ್ಲೇಶ್ವರ ಸ್ವಾಮಿಗೆ ತುಂಡುಲಪೂಜಾ, ಆರತಿ ಹಾಗೂ ವೀರಗಾಸೆ ಕುಣಿತ, 10 ರಂದು ಶ್ರೀಕಾಳಘಟ್ಟಮ್ಮ ದೇವಿಗೆ ಆರತಿ, ಬಾನ, ಘಟೆ ಜರುಗಲಿದ್ದು ಅಂದು ರಾತ್ರಿ 9 ಗಂಟೆಗೆ ಶಿವಭಕ್ತ ಚಂಡಾಸುರ ಪೌರಾಣಿಕ ನಾಟಕ ಇದೆ.