'ಅವಮಾನ ಸಹಿಸಿಕೊಂಡಾಗ ಸಾಧನೆ ಸಾಧ್ಯ'
ತುಮಕೂರು: ಅಸಡ್ಡೆ, ಅವಮಾನಗಳನ್ನು ಸಹಿಸಿಕೊಂಡಾಗ ಮಾತ್ರ ಮಹತ್ಸಾಧನೆ ಸಾಧ್ಯ ಎಂದು ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ಗುಬ್ಬಿ ತಾಲೂಕು ಕಾಡಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಮಕ್ಕಳೊಡನೆ ಮಾತುಕಥೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಯಶಸ್ಸು ಸಾಧಕನ ಸ್ವತ್ತು, ಅದಕ್ಕಾಗಿ ಅವನು ತನ್ನ ಸುತ್ತಮುತ್ತಲಿನವರಿಂದಲೇ ಮೊದಲ ಹಂತದಲ್ಲಿ ಅವಮಾನ ಹಾಗೂ ಮುಂದಿನ ಹಂತದಲ್ಲಿ ಬಿಗುಮಾನ ಸಹಿಸಿಕೊಂಡರೆ ಮುಂದೆ ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಆದ್ದರಿಂದ ಮಕ್ಕಳು ತಮ್ಮ ಮುಂದಿನ ಗುರಿ ತಲುಪುವವರೆಗೆ ಅನ್ಯಮನಸ್ಕರಾಗದೆ ಏಕಾಗ್ರತೆಯಿಂದ ಮುನ್ನಡೆಯಬೇಕು ಎಂದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಾಜ್ಯದಲ್ಲೆ ಒಂದು ವಿಶಿಷ್ಠ ಸರ್ಕಾರಿ ಶಾಲೆಯಾಗಿದ್ದು, ಮಕ್ಕಳು ನಾಡಿನ ವಿವಿಧ ಕ್ಷೇತ್ರದ ಸಾಧಕರೊಂದಿಗೆ ಸಂವಾದಿಸುವ ಮಕ್ಕಳೊಡನೆ ಮಾತುಕತೆ ಕಾರ್ಯಕ್ರಮ ಬಹಳ ಅಭಿನಂದನೀಯ ಹಾಗೂ ಅರ್ಥಪೂರ್ಣ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಗುಬ್ಬಿರವರು, ಎಲ್ಲಾ ಸರ್ಕಾರಿ ಶಾಲೆಗಳು ಕಾಡಶೆಟ್ಟಿಹಳ್ಳಿಯ ಶಾಲೆಯಂತಾದರೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ನರಸಿಂಹಯ್ಯ, ತೇಜ, ಶಿವರತ್ನ, ನೀಲಾವತಿ, ಲಿಂಗದೇವರು ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.