'ಇಂದಿನ ಯುವಕರಿಗೆ ವಿವೇಕರ ಶಕ್ತಿ ಅಗತ್ಯ'
ತುಮಕೂರು: ಯುವಕರು ಈ ರಾಷ್ಟ್ರದ ಮಹಾನ್ ಶಕ್ತಿ. ವೀರ ಸನ್ಯಾಸಿ ವಿವೇಕಾನಂದರ ಶಕ್ತಿ ಇಂದಿನ ಯುವಕರಿಗೆ ಅಗತ್ಯವಾಗಿದೆ ಎಂದು ಚಿಕ್ಕತೊಟ್ಲುಕೆರೆಯ ಅಟವಿ ಸುಕ್ಷೇತ್ರದ ಅಟವಿ ಶಿವಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಗರದ ಕ್ಯಾತ್ಸಂದ್ರದಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜರುಗಿದ ವಿವೇಕಾನಂದ ವಿಚಾರ ವೇದಿಕೆ ಉದ್ಘಾಟನೆ ಮತ್ತು ನೇತ್ರ ಸಂಗ್ರಹಕಾರ ಎನ್.ಎನ್. ಶ್ರೀಧರ್ ಅವರ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಉದ್ಯಮಿ ಸಿ.ವಿ. ಮಹದೇವಯ್ಯ ಸಮಾರಂಭ ಉದ್ಘಾಟಿಸಿ, ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದು ಜಾಗೃತಿ ಮೊಳಗಿಸಿದ ವಿವೇಕಾನಂದರ ಹೆಸರಿನಲ್ಲಿ ವೇದಿಕೆ ಪ್ರಾರಂಭವಾಗಿರುವುದು ಹರ್ಷದ ಸಂಗತಿ ಎಂದರು. ವಿವೇಕಾನಂದರ ಭಾವಚಿತ್ರ ಅನಾವರಣಗೊಳಿಸಿದ ಜಿಪಂ ಮಾಜಿ ಸದಸ್ಯ ಎನ್.ಆರ್. ಜಯರಾಮ್ ಮಾತನಾಡಿದರು. ವಿವೇಕಾನಂದ ವಿಚಾರ ವೇದಿಕೆಯಿಂದ ನೇತ್ರ ಸಂಗ್ರಹ ರತ್ನ ಪ್ರಶಸ್ತಿ ಪುರಸ್ಕೃತ ಎನ್.ಎನ್. ಶ್ರೀಧರ್ ಅವರಿಗೆ ಪೇಟತೊಡಿಸಿ ಸನ್ಮಾನಿಸಿದ ವೇದಿಕೆ ಅಧ್ಯಕ್ಷ ಕೆ.ಜಿ.ಎಲ್. ರವಿ ಮಾತನಾಡಿ, ಅಳಿದವರ ಕಣ್ಣು ಸಂಗ್ರಹಿಸಿ ಸುಮಾರು ಎಂಟುನೂರು ಮಂದಿಗೆ ನೇತ್ರದಾನ ಮಾಡಿ ಶ್ರೀಧರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವೇದಿಕೆಯು ಕವಿತಾಕೃಷ್ಣರ ಮಾರ್ಗದರ್ಶನದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಕವಿತಾ ಕೃಷ್ಣ ಅವರು ವಿವೇಕಾನಂದರ ಬದುಕಿನ ಚಿತ್ರಣ ನೀಡಿ, ಇನ್ನು ತುಳಿದು ಅಳಿಯುವ ಗುಣ ಸಾಕು, ಇನ್ನು ತಿಳಿದು ಬೆಳೆಯುವ-ಬೆಳೆಸುವ ಗುಣ ಬೇಕು ಎಂದರು.
ಕುಂಚಶ್ರೀ ಪ್ರಶಸ್ತಿ ಪ್ರದಾನ ಇಂದು
ಕೊರಟಗೆರೆ: ತಾಲೂಕಿನ ಎಲೇರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥಸ್ವಾಮೀಜಿಯವರ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಕುಂಚಶ್ರೀ ಪ್ರಶಸ್ತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಲಿದೆ. ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ವಹಿಸಿದರೆ, ಸಾನ್ನಿಧ್ಯವನ್ನು ತುಮಕೂರು ಹಿರೇಮಠದ ಡಾ. ಶಿವಾನಂದಶಿವಾಚಾರ್ಯ, ಸೋಲೂರು ಈಡಿಗ ಮಹಾಸಂಸ್ಥಾನ ಮಠದ ಆರ್ಯರೇಣುಕಾ ನಂದಸ್ವಾಮೀಜಿ, ಸೇರಿದಂತೆ ಇತರರು ಭಾಗವಹಿಸುವರು.