ನಮ್ಮಲ್ಲಿ ಎಲ್ಲ ಧರ್ಮಗಳಿಗೂ ಅವಕಾಶ: ಬಾಳೆಹೊನ್ನೂರು ಶ್ರೀ
ಶಿರಾ: ಉತ್ಕೃಷ್ಠವಾದ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಧರ್ಮಗಳಿಗೂ ಅವಕಾಶವಿದೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಎಲ್ಲರಲ್ಲೂ ಬೆಳೆದು ಬರಬೇಕಾಗಿದೆ. ಈ ನಿಟ್ಟಿನಲ್ಲಿ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುವುದೇ ವೀರಶೈವ ಧರ್ಮದ ಪರಮ ಗುರಿ ಎಂದು ಬಾಳೆಹೊನ್ನೂರು ಶ್ರೀಮಠದ ಪೀಠಾಧ್ಯಕ್ಷ ಶಿವಾಚಾರ್ಯ ಮಹಾ ಸ್ವಾಮಿ ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ನಗರದ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಬಸವೇಶ್ವರ ಜಯಂತೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾವೇಶದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇತ್ತೀಚೆಗೆ ವೀರಶೈವ ಧರ್ಮವನ್ನು ಜನರು ಅವರಲ್ಲಿನ ಸಂಘಟನೆಯ ಕೊರತೆಯನ್ನು ಉಪಯೋಗಿಸಿಕೊಂಡು ರಾಜಕೀಯಕ್ಕೆ ತುಳಿತಕ್ಕೊಳಗಾಗುವಂತೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಾಜಿ ಶಾಸಕ ವೀರಭದ್ರಯ್ಯ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳು, ಬಾಳೆಹೊನ್ನೂರು ಶಾಖಾ ಮಠ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಕಾರದೇಶ್ವರ ಮಠದ ವೀರಬಸವ ಮಹಾಸ್ವಾಮಿಗಳು, ಚಿಕ್ಕನಹಳ್ಳಿ ಗವಿಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಗದಗ ಲಕ್ಷ್ಮೇಶ್ವರ ಕ್ಷೇತ್ರದ ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಬರಗೂರು ತಿಪ್ಪೇಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ ಎಸ್ಸೆಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ವಿದ್ಯಾರ್ಥಿಗಳು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಗಾಸೆ ಕಲಾವಿದ ಸಿ.ಬಿ.ವೀರಣ್ಣ ಅವರನ್ನು ಸನ್ಮಾನಿಸಲಾಯಿತು. ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಮಾಜ ವತಿಯಿಂದ ಶಿರಾ ನಗರದ ಮೇಗಳಪೇಟೆ ಶ್ರೀ ಕಟ್ಟೆಬಸವೇಶ್ವರ ಸ್ವಾಮಿ ದೇವಸ್ಥಾನದಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಮತ್ತು ಜಗದ್ಗುರು ರೇಣುಕಾಚಾರ್ಯಯ ವಿಗ್ರಹದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲಾಯಿತು.