ಶಾಲಾ ದಿಢೀರ್ ಭೇಟಿಗೆ ಸಜ್ಜಾಗಿ
ತುಮಕೂರು: ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದ ಶಿಕ್ಷಕರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಾಲೆಗಳಿಗೆ ದಿಢೀರ್ ಭೇಟಿ ನೀಡುವ ಮಿಂಚಿನ ಸಂಚಾರ ಕಾರ್ಯಕ್ರಮಕ್ಕೆ ಸನ್ನದ್ಧರಾಗುವಂತೆ ತುಮಕೂರು(ದ) ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಿಗೆ ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಸೂಚಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಆವರಣದಲ್ಲಿ ಎಸ್ಸೆಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ಶಾಲೆ ಬಿಟ್ಟ 2228 ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಂಪೂರ್ಣ ಹೊಣೆಗಾರಿಕೆ ಸಿಆರ್‌ಪಿ. ಹಾಗೂ ಹೆಡ್‌ಮಾಸ್ಟರ್‌ಗಳ ಮೇಲಿದ್ದು, ಇನ್ನು 4 ದಿನದೊಳಗಾಗಿ ಸಿಆರ್‌ಪಿಗಳು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಕಾರ್ಯನಿರತರಾಗಬೇಕು. ತಪ್ಪಿದಲ್ಲಿ ನೋಟಿಸ್ ನೀಡುವಂತೆ ತಿಳಿಸಿದರು.
ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಒಟ್ಟು 4 ಸಾವಿರ ಶಾಲೆಗಳ ಸುಮಾರು ಮೂರುವರೆ ಲಕ್ಷ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳಿಗೆ ಸಮವಸ್ತ್ರ ವಿತರಿಸಲಾಗಿದೆ. ತುಮಕೂರು (ದ) ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ಸಮವಸ್ತ್ರ ಇನ್ನೊಂದು ವಾರದೊಳಗಾಗಿ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಂತಹ ಶಾಲೆಗಳ ಗಣಿತ ಮತ್ತು ವಿಜ್ಞಾನ ಶಿಕ್ಷಕರನ್ನು ಗುರುತಿಸಿ, ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿಗಣಿಸಿ. ಇತರೆ ಶಿಕ್ಷಕರಿಗೆ ತಮ್ಮ ಅನುಭವ ಹಂಚಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸುವಂತೆ ಡಿಡಿಪಿಐಗಳಿಗೆ ಮತ್ತು ಬಿಇಓಗಳಿಗೆ ತಿಳಿಸಿದರು.
ಶಾಲಾ ಕಟ್ಟಡಗಳ ಮೇಲೆ ವಿದ್ಯುತ್ ತಂತಿ ಹಾದುಹೋಗಿರುವಂತಹ ಶಾಲೆಗಳನ್ನು ಗುರುತಿಸಿ, ಪಟ್ಟಿ ನೀಡಿದಲ್ಲಿ ಬೆಸ್ಕಾಂ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವಂತೆ ತಿಳಿಸಿದರು.
ಅಲ್ಲದೆ ಎಸ್‌ಡಿಎಂಸಿ ಸಭೆಗಳು ಮತ್ತು ಪೋಷಕ ಸಭೆಗಳು ಕಾಲಕಾಲಕ್ಕೆ ನಡೆಯುತ್ತಿರುವ ಬಗ್ಗೆ ಪರಿಶೀಲಿಸುವಂತೆ ಮತ್ತು ಮೇಲ್ಚಾಣಿಗಳು ಶಿಥಿಲಾವಸ್ಥೆಯಲ್ಲಿರುವಂತಹ ಶಾಲೆಗಳ ಪಟ್ಟಿ ಮಾಡುವಂತೆ ಮತ್ತು ಅಕ್ಷರ ದಾಸೋಹ ಕೋಣೆ ಶುಚಿತ್ವಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಮತ್ತು ನಿವೇಶನ ದಾನ ಪಡೆದಂತಹ ಶಾಲೆಗಳ ನಿವೇಶನಗಳ ಖಾತಾ ಆಂದೋಲನ ಏರ್ಪಡಿಸುವಂತೆ ಅವರು ಈ ಸಂದರ್ಭ ಸೂಚಿಸಿದರು.
ಸಭೆಯಲ್ಲಿ ಉಭಯ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ.ಗಳು ಮತ್ತು ಎಲ್ಲಾ ತಾಲೂಕುಗಳ ಬಿ.ಇ.ಓ. ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.