ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನಾಥ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ ಶಾಸಕ

Rashmi Kasaragodu
Updated On : 13 Jun 2014, 2:08 am

ತುರುವೇಕೆರೆ: ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥವಾಗಿ ಅಜ್ಜಿ ಮಡಿಲಲ್ಲಿ ಬದುಕುತ್ತಿರುವ ವಿನುತಾ ಹಾಗೂ ಲಲಿತಾಳ ಬಗ್ಗೆ ಬಂದ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶಾಸಕ ಎಂ.ಟಿ. ಕೃಷ್ಣಪ್ಪ ವರದಿಯನ್ನು ಗಮನಿಸಿದ ಕೂಡಲೇ ಅಜ್ಜಿ ಸಾಕ್ಕಮ್ಮನವರ ಮನೆಯ ಬಳಿಗೇ ತೆರಳಿ 10 ಸಾವಿರ ರು. ನೆರವು ನೀಡಿದರು. ಮುಂಬರುವ ದಿನಗಳಲ್ಲಿ ವಿನುತಾ ಹಾಗೂ ಲಲಿತಾಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿಶೇಷ ಕೋಟಾದಡಿ ಪ್ರವೇಶ ಕೊಡಿಸುವ ಭರವಸೆ ನೀಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸವಲತ್ತು ನೀಡುವ ಭರವಸೆಯನ್ನೂ ಶಾಸಕ ಕೃಷ್ಣಪ್ಪ ನೀಡಿದರು.
 ಶಿಥಿಲಗೊಂಡಿರುವ ಮನೆಯನ್ನು ಪುನರ್ ನವೀಕರಣ ಮಾಡಲು ಅಗತ್ಯವಿರುವ ನೆರವನ್ನು ನೀಡುವುದಾಗಿ ಅಜ್ಜಿ ಸಾಕಮ್ಮ ನವರಿಗೆ ತಿಳಿಸಿದರು. ಇದೇ ವೇಳೆ ಬಾಣಸಂದ್ರದಲ್ಲಿ ಅನಾಥ ಸ್ಥಿತಿಯಲ್ಲಿರುವ ಶಿಕ್ಷಕ ದಿವಂಗತ ಮಾಯಾಚಾರ್ ಕುಟುಂಬಕ್ಕೆ ಅಗತ್ಯವಿರುವ ಮನೆ ನಿರ್ಮಾಣಕ್ಕೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ್‌ಗೆ ಸೂಚಿಸಿದರು. ಗ್ರಾಮದ ಮುಖಂಡರಾದ ಪಾಂಡುರಂಗಯ್ಯ, ಸಿದ್ದೇಗೌಡರು, ಗ್ರಾಮ ಪಂಚಾಯ್ತಿ ಸದಸ್ಯರಾದ ಗಂಗಾಧರ್, ಪ್ರಕಾಶ್, ನೀರಗಂಟಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಇದ್ದರು.
ಭರವಸೆಯ ಮಹಾಪೂರ: ಮೊಮ್ಮಕ್ಕಳ ಲಾಲನೆ ಪೋಷಣೆಯಲ್ಲಿ ಇರುವ ಸಾಕಮ್ಮರಿಗೆ ಓದುಗರಿಂದ ಉತ್ತಮ ಬೆಂಬಲ ದೊರಕಿದೆ. ತುಮಕೂರಿನ ಹಿರೇಹಳ್ಳಿ ಬ್ಯಾಂಕ್‌ನಿಂದ ಯಾರೋ 10 ಸಾವಿರ ರು. ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಹಲವಾರು ಮಂದಿ ಕರೆ ಮಾಡಿ ಖುದ್ದಾಗಿ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ತುಮಕೂರಿನ ಶ್ರೀ ಸಾಯಿ ಪ್ರಿಯ ಸೇವಾ ಟ್ರಸ್ಟ್‌ನ ತರುಣ್ ಗೌಡ ಆ ಎರಡು ಮಕ್ಕಳ ವಿದ್ಯಾಭ್ಯಾಸದ ಖರ್ಚು ಹಾಗೂ ಸಮವಸ್ತ್ರಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ. ತಾಲೂಕಿನ ಚಿಮ್ಮನಹಳ್ಳಿಯ ಮುನೇಶ್ವರ ಟ್ರಸ್ಟ್‌ನ ನಿರ್ದೇಶಕ ಜವರಪ್ಪ ಮಕ್ಕಳನ್ನು ತಮ್ಮ ಸಂಸ್ಥೆಯಲ್ಲೇ ಓದಿಸುವ ಭರವಸೆಯನ್ನು ನೀಡಿದ್ದಾರೆ. ಹತ್ತು ಹಲವಾರು ಮಂದಿ ಅಜ್ಜಿ ಸಾಕಮ್ಮರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಮಕ್ಕಳಿಗೆ ಓದಿನ ಕಡೆ ಒಲವು ತೋರಿಸುವಂತೆ ಸೂಚಿಸಿ ಕೈಲಾಸ ಸಹಾಯವನ್ನು ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಾವು ತಬ್ಬಲಿ, ಒಬ್ಬಂಟಿ ಎಂದುಕೊಂಡಿದ್ದ ಸಾಕಮ್ಮಳ ಕುಟುಂಬಕ್ಕೆ ಓದುಗರು ನೀಡುತ್ತಿರುವ ಭರವಸೆ ಹೊಸ ಹುರುಪು ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement