ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಲೂಕಿನಾದ್ಯಂತ ಉತ್ತಮ ಬೆಳೆ

Rashmi Kasaragodu
Updated On : 13 Jun 2014, 2:07 am

ತಿಪಟೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಬಿತ್ತನೆ ಪ್ರಮಾಣ ಕೂಡ ಜಾಸ್ತಿಯಾಗಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಬಿ.ಜಿ.ಜಯಪ್ಪ ತಿಳಿಸಿದರು.
ತಾಲೂಕು ಕೃಷಿ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಇದೇ ಅವಧಿಯಲ್ಲಿ 84 ಮಿಮಿ ಮಳೆಯಾಗಿದ್ದರೆ ಈ ವರ್ಷ 133ಮಿಮಿ ಸುರಿದಿದ್ದು, 42ಮಿಮಿ ಹೆಚ್ಚು ಮಳೆಯಾಗಿದೆ. ಬಿತ್ತನೆ ಕೂಡ ಉತ್ತಮವಾಗಿದ್ದು ಎಲ್ಲ ಬೆಳೆಗಳಿಂದ ಒಟ್ಟು 4730 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲೂಕಿನ ರೈತರು ಹೆಚ್ಚಾಗಿ ಹೆಸರುಕಾಳು ಬಿತ್ತನೆ ಮಾಡಿದ್ದು 2227 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೊಗರಿ 958 ಹೆಕ್ಟೇರ್, ಹಲಸಂದೆ 613 ಹೆಕ್ಟೇರ್, ಉದ್ದು 449 ಹೆಕ್ಟೇರ್ ಮತ್ತು ಎಳ್ಳು 112 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೆಳೆ ಕೂಡ ಉತ್ತಮವಾಗಿದ್ದು ಹೂ ಬಿಡುವ ಹಂತದಲ್ಲಿದೆ. ಈಗ ಒಂದೆರಡು ಉತ್ತಮ ಮಳೆ ಅವಶ್ಯಕವಿದ್ದು ಮಳೆ ಬಿದ್ದರೆ ಬಂಪರ್ ಬೆಳೆ ನಿರೀಕ್ಷಿಸಬಹುದಾಗಿದೆ ಎಂದರು.
2014ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಮೆ ಯೋಜನೆಯಲ್ಲಿ ಎಲ್ಲ ರೈತರಿಗೆ ಬೆಳೆ ವಿಮೆ ಮಾಡಿಸಲು ಸೂಚಿಸಲಾಗಿದ್ದು, ಇನ್ನೂ ಬೆಳೆ ವಿಮೆ ಮಾಡಿಸದ ರೈತರು ತಕ್ಷಣವೇ ಪಹಣಿ ಅಥವಾ ಬೆಳೆ ದೃಡೀಕರಣ ಪತ್ರದೊಂದಿಗೆ ಬಂದು ವಿಮೆ ಹಣ ಪಾವತಿಸಿ ವಿಮೆ ಮಾಡಿಸಲು ಕೋರಿದರು.
ಇದೇ ತಿಂಗಳ 30ರಂದು ವಿಮೆ ಹಣ ಪಾವತಿಸಲು ಕಡೆಯ ದಿನ. ಸಾಲ ಪಡೆದ ಹಾಗೂ ಪಡೆಯದ ರೈತರೂ ಇದಕ್ಕೆ ಅರ್ಹರಾಗಿರುತ್ತಾರೆ. ಬೆಳೆ ವಿಮೆ ಪರಿಹಾರ ಕೂಡ ವಿವಿಧ ಹಂತಗಳಿಗೆ ಲಭ್ಯವಿದ್ದು ಬೆಳೆ ಭಾಗಶಃ ಅಥವಾ ಸಂಪೂರ್ಣ ವಿಫಲವಾದರೂ ಪರಿಹಾರ ಸಿಗಲಿದೆ ಎಂದರು.
ರಸಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ತಾಲೂಕಿನ ಸಹಕಾರ ಸಂಘ ಹಾಗೂ ಖಾಸಗಿ ಮಾರಾಟಗಾರರ ಬಳಿ ವಿವಿಧ ರಸಗೊಬ್ಬರಗಳು ಸೇರಿ ಒಟ್ಟು ಸುಮಾರು 400 ಮೆಟ್ರಿಕ್ ಟನ್ ದಾಸ್ತಾನಿದ್ದು ಸರ್ಕಾರದ ಸಂಗ್ರಹದಲ್ಲಿ ಸುಮಾರು 605 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದರು.
ತಾಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾದ ಕೃಷಿ ಪರಿಕರಗಳಾದ ನೇಗಿಲು, ಕಲ್ಟಿವೇಟರ್, ಸ್ಪ್ರೇಯರ್‌ಗಳು ಹಾಗೂ ಕೀಟನಾಶಕಗಳು ಹಾಗೂ ಔಷಧಿಗಳೂ ಕೂಡ ಲಭ್ಯವಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement