ಬಾಲಕಿ ಮೇಲೆ ಮೌಲ್ವಿ ದೌರ್ಜನ್ಯ: ಸವಿತಾ ಸಮಾಜ ಮುಖಂಡರಿಂದ ಪ್ರತಿಭಟನೆ
ಮಂಡ್ಯ: ಬಾಲಕಿ ಮೇಲೆ ಮೌಲ್ವಿ ನಡೆಸಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ರಾಜ್ಯ ಸವಿತಾ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ ಮುಖಂಡರು, ನಂತರ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಘೋಷಣೆಗಳನ್ನು ಕೂಗಿದರು. ಅಲ್ಲಿಂದ ಆಸ್ಪತ್ರೆ ಎದುರಿನ ಬೆಂಗಳೂರು-ಮೈಸೂರು ಹೆದ್ದಾರಿಗೆ ಆಗಮಿಸಿ ಬಾಲಕಿ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಆಕ್ರೋಶ: ರಾಷ್ಟ್ರದಲ್ಲಿ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರ ಮೇಲೆ ನಿತ್ಯ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದಂತಹ ದೌರ್ಜನ್ಯ ಪ್ರಕರಣಗಳು ಕರ್ನಾಟಕದಲ್ಲೂ ನಡೆಯಲು ಆರಂಭವಾಗಿವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡಿರುವ ಅನೇಕರು ಅವರನ್ನು ಮೂಢನಂಬಿಕೆಯ ಪ್ರಭಾವಕ್ಕೊಳಪಡಿಸಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇಂತಹ ದುಷ್ಕೃತ್ಯಗಳಿಗೆ ಯುವತಿಯರು, ಮಹಿಳೆಯರು ಹೆಚ್ಚು ಒಳಗಾಗುತ್ತಿದ್ದಾರೆ ಎಂದು ಆಂತಕ ವ್ಯಕ್ತಪಡಿಸಿದರು. ದೌರ್ಜನ್ಯ: ಪ್ರಜ್ಞಾವಂತಿಕೆ ಇಲ್ಲದ ಜನರಲ್ಲಿ ದೆವ್ವ, ಪಿಶಾಚಿಯ ಭ್ರಾಂತಿಯನ್ನು ತುಂಬುತ್ತಿದ್ದಾರೆ. ವಿಜ್ಞಾನದ ಗಂಧ-ಗಾಳಿ ಗೊತ್ತಿಲ್ಲದವರು ಮಾಟ-ಮಂತ್ರಶಕ್ತಿಯ ಬಗ್ಗೆ ಜನರನ್ನು ನಂಬಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿರುವುದು ಮಾತ್ರವಲ್ಲದೆ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸುತ್ತಿವುದನ್ನು ಖಂಡಿಸಿದರು. ಈ ಘಟನೆಗಳಿಗೆ ಮುಗ್ಧ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಇಂತಹ ಢೋಂಗಿ ಕೇಂದ್ರಗಳ ಮೇಲೆ ರಾಜ್ಯಸರ್ಕಾರ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.