ಪೊಲೀಸ್ ಅಟ್ಟಹಾಸಕ್ಕೆ ಯುವ ರೈತ ವ್ಯಾಪಾರಿ ಬಲಿ
ತಿಪಟೂರು: ಪೊಲೀಸರ ಅಟ್ಟಹಾಸಕ್ಕೆ ರೈತ ವ್ಯಾಪಾರಿ ಬಲಿಯಾಗಿದ್ದು, ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಮೃತರ ಕುಟುಂಬ ಹಾಗೂ ಸಂಬಂಧಿಗಳು ಸೇರಿದಂತೆ ರೈತರು ಪಟ್ಟುಹಿಡಿದ ಘಟನೆ ನಡೆಯಿತು.
ಪ್ರತಿಭಟನೆ ನಡೆಯುತ್ತಿದ್ದ ಕರಡಾಳು ಸಂತೆ ಮೈದಾನಕ್ಕೆ ಆಗಮಿಸಿದ ಎಎಸ್ಪಿ ಲಕ್ಷ್ಮಣ್ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಪೊಲೀಸರು ಹೇಳುವಂತೆ ಕಿರಣ್ ಹೃದಯಾಘಾತದಿಂದ ಸತ್ತಿಲ್ಲ. ಒಂದು ವೇಳೆ ಹಾಗಾಗಿದ್ದರೆ, ಆಫೆ ಆಟೋದಿಂದ ಇನ್ನೂರು ಮೀ.ನಷ್ಟು ದೂರದಲ್ಲಿ ಕಿರಣ್ ಯಾಕೆ ಸತ್ತಿದ್ದು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇಲ್ಲಿ ಸಂತೆಗೆ ಬರುವ ರೈತರನ್ನು ಪೊಲೀಸರು ಸುಲಿಗೆ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದರು. ಘಟನೆ ಸಂಧರ್ಭದಲ್ಲಿ ಸಮವಸ್ತ್ರವಿಲ್ಲದ ಪೊಲೀಸರು ಖಾಸಗಿ ವಾಹನದಲ್ಲಿ ಬಂದಿದ್ದರಲ್ಲದೆ, ಸಂತೆ ಮೈದಾನವೇ ಅಲ್ಲದೆ ಅಕ್ಕಪಕ್ಕದ ಹಳ್ಳಿಗಳ ಮನೆಯ ಮುಂದೆ ರಾಸುಗಳನ್ನು ಕಟ್ಟಿಕೊಂಡು ಮಲಗಿದ್ದವರ ಮೇಲೂ ಲಾಠಿ ಪ್ರಹಾರ ಮಾಡಿದ್ದಾರೆಂದು ದೂರಿದರು.
ಆಕ್ರಂದನ: ಮೃತನ ಸಂಬಂಧಿಕರು ಕಿರಣ್ ಯಾವುದೇ ದುಶ್ಚಟಕ್ಕೆ ಬಲಿಯಾಗಿದ್ದವನಲ್ಲ. ವ್ಯವಸಾಯದ ಜೊತೆಗೆ ಆಫೆ ಆಟೋದ ಮೂಲಕ ದುಡಿಮೆ ಮಾಡುತ್ತಿದ್ದ. ಅಂತಹವನನ್ನು ಪೊಲೀಸರು ಬಲಿ ತೆಗೆದುಕೊಂಡಿದ್ದಾರೆಂದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಸಕರ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಷಡಕ್ಷರಿ, ಅಧಿಕಾರಿಗಳೊಂದಿಗೆ ಘಟನೆ ಬಗ್ಗೆ ಚರ್ಚಿಸಿ ಸಾವಿಗೆ ಕಾರಣರಾದ ನೊಣವಿನಕೆರೆ ಪೊಲೀಸರ ವಿರುದ್ಧ ಕ್ರಮಕೈಗೊಂಡು ಅವರನ್ನು ಅಮಾನತ್ತುಗೊಳಿಸಲು ಜಿಲ್ಲಾ ಎಸ್ಪಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಸರ್ಕಾರದಿಂದ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಡಿಸಿದರು. ಶವಸಂಸ್ಕಾರಕ್ಕೆ ವೈಯಕ್ತಿಕವಾಗಿ ರು. 10 ಸಾವಿರ ನೀಡಿದರು. ಎಪಿಎಂಸಿ ವತಿಯಿಂದ ಮೃತಕುಟುಂಬಕ್ಕೆ 50 ಸಾವಿರ ಪರಿಹಾರ ನೀಡುವುದಾಗಿ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.
ಏನಿದು ಘಟನೆ?
ತಾಲೂಕಿನ ಕರಡಾಳು ಸಂತೆ ಮೈದಾನದಲ್ಲಿ ಪ್ರತಿ ಮಂಗಳವಾರ ಎಪಿಎಂಸಿ ವತಿಯಿಂದ ದನಗಳ ಸಂತೆ ನಡೆಯುತ್ತಿತ್ತು. ಹತ್ಯಾಳು ಗ್ರಾಮದ ಕಿರಣ್(23) ಕರಡಾಳು ಸಂತೆಯಲ್ಲಿ ಭೂಮಿ ಉಳುಮೆಗೆಂದು ಒಂದು ಜೊತೆ ಎತ್ತು ತರಲು ತನ್ನ ಆಫೆ ಆಟೋದಲ್ಲಿ ಸಂತೆಗೆ ಬಂದಿದ್ದರು. ಅಲ್ಲಿದ್ದ ನೊಣವಿನಕೆರೆ ಪೊಲೀಸರು ಸಂತೆ ಮೈದಾನದಲ್ಲಿ ಸೋಮವಾರ ರಾತ್ರಿ ರೈತರ ಮೇಲೆ ದಾಳಿ ನಡೆಸುತ್ತಿದ್ದರು. ಇದನ್ನು ನೋಡಿದ ಕಿರಣ್ ಆಫೆ ಆಟೋದಿಂದ ಇಳಿದು ಹೆದರು ಓಡಲಾರಂಭಿಸಿದರು. ಇವರನ್ನು ಹಿಡಿಯಲು ಪೊಲೀಸರು ಬೆನ್ನುಹತ್ತಿದ್ದಾರೆ. ಕಿರಣ್ ಸಂತೆಯ ಕಾಂಪೌಂಡ್ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಆಗ ಇಬ್ಬರು ಪೊಲೀಸರು ಕಿರಣ್ಗೆ ಲಾಠಿಯಿಂದ ಹೊಡೆದಿದ್ದಾರೆ. ಹೊಡೆತಗಳು ಕಿರಣ್ನ ಮರ್ಮಾಂಗಕ್ಕೆ ಬಿದ್ದು ಮೃತಪಟ್ಟಿದ್ದಾನೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪ ತಳ್ಳಿಹಾಕಿದ್ದು, ಕಿರಣ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.