ಶಿವಯೋಗಿ ಸಾಧನೆ ಏನು ಸ್ವಾಮಿ?
ತುಮಕೂರು: ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಶಿವಯೋಗಿಸ್ವಾವು ಅವರ ಸಾಧನೆ ಏನು ಎಂದು ಹರಿಹರ ಶಾಸಕ ಎಚ್.ಎಸ್. ಶಿವಶಂಕರ್ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಬಿಜೆಪಿಯ ಶಿವಯೋಗಿಸ್ವಾವು ಅವರು, ಆಗ ತಮ್ಮದೇ ಪಕ್ಷದ ಸರ್ಕಾರವಿದ್ದ ಕಾರಣಕ್ಕೆ ಗೆದ್ದರೂ ತಮ್ಮದೆಂದು ಹೇಳಿಕೊಳ್ಳುವ ಯಾವುದೇ ಒಂದು ಯೋಜನೆಯನ್ನು ಕಾರ್ಯಗತಗೊಳಿಸಲಿಲ್ಲ ಎಂದರು.
2008ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹಾಗೂ 2013ರಲ್ಲಿ ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಚೌಡರೆಡ್ಡಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದು, ಸೋತರು ಕ್ಷೇತ್ರದ ಪದವೀಧರು, ಶಿಕ್ಷಕರೊಡನೆ ಇಟ್ಟುಕೊಂಡ ನಿರಂತರ ಸಂಪರ್ಕ, ಒಡನಾಟ ಪ್ರಸಕ್ತ ಸಾಲಿನಲ್ಲಿ ಅವರ ಗೆಲವಿಗೆ ಸಹಾಯಕವಾಗಲಿದೆ. ಕಳೆದೆರೆಡು ಬಾರಿ ಸೋಲಿನ ಅನುಕಂಪದ ಜತೆಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ ಸಾಧನೆ ಜೆಡಿಎಸ್ ಅಭ್ಯರ್ಥಿ ಗೆಲವಿಗೆ ಪೂರಕವಾಗಿದೆ ಎಂದರು.
ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯಲ್ಲಿ ಪ್ರತಿ ತಾಲೂಕಿಗೆ ಪದವಿ ಕಾಲೇಜು, ಎರಡ್ಮೂರು ಪದವಿ ಪೂರ್ವ ಕಾಲೇಜು ಸೇರಿ ಅತಿಥಿ ಉಪನ್ಯಾಸಕರ ವೇತನ ಹತ್ತು ಸಾವಿರಗಳಿಗೆ ಏರಿಕೆ, ಕೆಪಿಎಸ್ಸಿ ಮೂಲಕ ಪದವೀಧರರಿಗೆ ಉದ್ಯೋಗ, ಶಿಕ್ಷಕರ ಮತ್ತು ಉಪನ್ಯಾಸಕರ ಬಡ್ತಿ, ಎಕ್ಸ್ಗ್ರೆಷಿಯಾ ಸೇರಿದಂತೆ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಯಿತು. ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಪದವೀಧರರು ಮತ್ತು ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಒಂದೇ ಒಂದು ಯೋಜನೆಯೂ ಜಾರಿಗೊಂಡಿಲ್ಲ ಎಂದು ದೂಷಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕಿಸಿಕೊಡಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದ್ದು, ಹೊಸ ನೇಮಕಾತಿ ಕೈಗೊಳ್ಳದೇ ಪದವೀಧರರು ವಯೋವುತಿ ಮೀರುವಂತೆ ಸರ್ಕಾರ ಮಾಡುತ್ತಿದೆ. ಪ್ರಾಂಶುಪಾಲರು. ಅಧ್ಯಾಪಕರ ಕಾಲಮಿತಿ ಬಡ್ತಿಯನ್ನು ಕಡಿತಗೊಳಿಸುವ ನಿರ್ಣಯವನ್ನು ಸರ್ಕಾರ ಕೈಗೊಂಡಿದ್ದು, 5 ಸಾವಿರ ಕೋಟಿ ವೆಚ್ಚ ಮಾಡಿ 1ಗೆ ಕೆಜಿ ಅಕ್ಕಿ ಕೊಡುತ್ತಿರುವ ಸರ್ಕಾರಕ್ಕೆ ಪದವೀಧರಿಗೆ ಅನುಕೂಲ ಕಲ್ಪಿಸಲು ಸಾಧ್ಯವಿಲ್ಲವೆ? ನಿಗದಿತ ಅವಧಿಯನ್ನು ಮಾನದಂಡವಾಗಿಸಿಕೊಂಡು ಶಾಲಾ-ಕಾಲೇಜಿಗೆ ಅನುದಾನ ಒದಗಿಸುವ ಕಾರ್ಯ ಆಗಬೇಕಿದೆಯೆಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್, ಸಿ.ವಿ. ಮಲ್ಲಿಕಾರ್ಜುನಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೀಲಾ ನಾಯಕ್, ಮುಖಂಡರಾದ ಬೆಳ್ಳಿಲೋಕೇಶ್, ಕೃಷ್ಣಮೂರ್ತಿ, ವಿಜಯಕುಮಾರ್, ಶ್ರೀಕಂಠಸ್ವಾಮಿ, ಚಂದ್ರಬಾಬು ಇತರರು ಹಾಜರಿದ್ದರು.