ಪುರಸಭೆ ಸಿಬ್ಬಂದಿ ಅಪವಿತ್ರ ಮೈತ್ರಿ
ಆಸ್ಪತ್ರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಪುರಸಭೆ ಸಿಬ್ಬಂದಿ ಆಸ್ಪತ್ರೆಯವರಿಗೆ ಸೂಚನೆ ನೀಡುತ್ತಿಲ್ಲ. ಕೆಲವು ಸಿಬ್ಬಂದಿ ಅಪವಿತ್ರ ಮೈತ್ರಿಯಿಂದಾಗಿ ಆಸ್ಪತ್ರೆ ತ್ಯಾಜ್ಯ ಸಹ ಪಟ್ಟಣದ ರಸ್ತೆಗಳ ಬದಿಯಲ್ಲೇ ಬಿದ್ದು ಅದೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಕಸ ವಿಲೇವಾರಿಗಾಗಿ ಸ್ವಯಂ ಸೇವಾ ಸಂಘಗಳ ನೆರವಿನಿಂದ ಕೈಗಾಡಿ ಮೂಲಕ ಶುಲ್ಕ ವಿಧಿಸಿ ಕಸ ಸಂಗ್ರಹಣೆಗೆ ಪುರಸಭೆ ಚಾಲನೆ ನೀಡಿತಾದರೂ,ನಾಗರಿಕರು ಮತ್ತು ಸ್ವಯಂ ಸೇವಾ ಸಂಘಗಳ ಅಸಹಕಾರದ ಪರಿಣಾಮ ಪ್ರಾರಂಭಗೊಂಡ ಯೋಜನೆ ಮೂಲೆಗುಂಪಾಗಿದೆ. ಕೈಗಾಡಿಗಳು ಮತ್ತು ಪ್ಲಾಸ್ಟಿಕ್ ಡ್ರಂಗಳು ಲೆಕ್ಕದಲ್ಲೇ ಇದ್ದರೂ ಪ್ರಭಾವಿಗಳ ಮನೆಯಲ್ಲಿ ಗೋದಾಮುಗಳ ಪಾಲಾಗಿವೆ. ಕೈಗಾಡಿಗೆ ಕಟ್ಟಿದ್ದ ಹಿತ್ತಾಳೆ ಗಂಟೆಗಳು ಸಹ ಮಾಯವಾಗಿ ಲಕ್ಷಾಂತರ ರು. ವ್ಯಯಿಸಿ ಕಸ ವಿಲೇವಾರಿಗೆ ಮಾಡಲಾದ ಯೋಜನೆ ಕಸದ ಪಾಲಾಗಿ ಹೋಗಿದೆ. ಕಸ ವಿಲೇವಾರಿಗೆ ವಿವಿಧ ಯೋಜನೆ ಹಾಗೂ ವಾಹನಗಳ ದುರಸ್ತಿ ನೆಪದಲ್ಲಿ ಕೋಟ್ಯಂತರ ರು. ವ್ಯಯವಾಗುತ್ತಿದ್ದರೂ ಪಟ್ಟಣದಲ್ಲಿ ಕಸಮಾತ್ರ ವಿಲೇವಾರಿಯಾಗದೆ, ಕಸದ ನೆಪದಲ್ಲಿ ಕೆಲವು ಪ್ರಭಾವಿ ಸದಸ್ಯರು ಮತ್ತು ಲಾಬಿ ನಡೆಸುವ ಗುತ್ತಿಗೆದಾರರು ಹಾಗೂ ಅಯ್ದ ಅಧಿಕಾರಿಗಳಿಗೆ ಮಾತ್ರ ಕಸ'ರಸ'ವಾಗಿರುವ ಕಾರಣ ಕಸದ ವಿಷಯ ಬಂದಾಗ ಪುರಸಭೆಯಲ್ಲಿ ಬಹುತೇಕ ಸದಸ್ಯರು ಸೊಲ್ಲೆತ್ತದೆ ಮೌನಕ್ಕೆ ಶರಣಾಗುವ ಕಾರಣ ಪಟ್ಟಣದಲ್ಲಿ ನಾಗರಿಕರ ಪಾಲಿಗೆ ಮಾತ್ರ ಕಸದ ಸಮಸ್ಯೆ ಬೃಹದಾಕಾರವಾಗಿದೆ.