ಅಭಿವೃದ್ಧಿ ಮೂಲಕ ಕ್ಷೇತ್ರದ ಜನಕ ಋಣ ತೀರಿಸುತ್ತೇನೆ: ಎಸ್.ಪಿ. ಮುದ್ದಹನುಮೇಗೌಡ
ಹುಳಿಯಾರು: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗುರುತಿಸಿ ಜಯಶೀಲರನ್ನಾಗಿ ಮಾಡಿರುವ ಈ ಕ್ಷೇತ್ರದ ಮತದಾರ ಋಣ ನನ್ನ ಮೇಲಿದೆ. ಅದನ್ನು ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದೆ ನನ್ನ ಗುರಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಎಸ್.ರಿ. ಮುದ್ದಹನುಮೇಗೌಡ ತಿಳಿಸಿದರು. ಹುಳಿಯಾರು ಸಮೀಪದ ಸೀಗೆಬಾಗಿ ಗೇಟ್ನ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರಾದ್ಯಂತ ಬಿಜೆಪಿ ಅಲೆಯಿದ್ದರೂ ಅದನ್ನು ತುಮಕೂರು ಕ್ಷೇತ್ರಕ್ಕೆ ಬಿಟ್ಟುಕೊಳ್ಳದೇ ಕಾಂಗ್ರೆಸ್ ಬೆಂಬಲಿಸಿ ನನ್ನನ್ನು ಗೆಲ್ಲಿಸಿದ್ದೀರಿ. ಈಗಾಗಲೇ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿತಿದ್ದು ಅವುಗಳನ್ನು ಬಗೆಹರಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಜತೆಗೆ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಹೊಸ ಯೋಜನೆ ರೂಪಿಸುತ್ತೇನೆ ಎಂದರು. ಇದಕ್ಕೂ ಮುನ್ನ ಸೀಗೆಬಾಗಿಯ ದುರ್ಗಾಪರಮೇಶ್ವರಿ ಮೂಲಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸಸಿ ನೆಡುವ ಮೂಲಕ ಮನೆಗೊಂದು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಜಿಪಂ ಸದಸ್ಯೆ ಮಂಜುಳಾ, ದೇವರಾಜು, ಎಪಿಎಂಸಿ ಉಪಾಧ್ಯಕ್ಷ ವೈ.ಸಿ.ಸಿದ್ರಾಮಯ್ಯ, ಮುಖಂಡ ಸಾಸಲು ಸತೀಶ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಆಶೋಕ್, ಗ್ರಾಪಂ ಸದಸ್ಯರಾದ ಬೋರಲಿಂಗಯ್ಯ, ರೇವಣ್ಣ ಸೇರಿದಂತೆ ಇತರರು ಇದ್ದರು.