ಕುಣಿಗಲ್‌ನಲ್ಲೂ ಕಸಬರಿಗೆ ಸಮಸ್ಯೆ
ಟಿ.ಎಚ್. ಆನಂದ್ ಸಿಂಗ್
ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲೂ ಕಸ ವಿಲೇವಾರಿ ಸಮಸ್ಯೆಯಿದೆ. ಕುಣಿಗಲ್ ಪಟ್ಟಣದ 23 ವಾರ್ಡ್‌ಗಳಲ್ಲಿ ದಿನವೂಂದಕ್ಕೆ 15ರಿಂದ 20 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದೆ.
ಕುಣಿಗಲ್ ಪುರಸಭೆಗೆ ಬೆಂಗಳೂರು, ತುಮಕೂರು ನಗರದಲ್ಲಿ ಉದ್ಭವವಾಗಿರುವ ಕಸ ವಿಲೇವಾರಿಗೆ ಜಾಗದ ಸಮಸ್ಯೆ ಇಲ್ಲ. ಹಿಂದಿನ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಸತತ ಒತ್ತಡದ ಪರಿಣಾಮ ಅರಕೆರೆ ಗ್ರಾಮದ ಸರ್ವೆ ನಂ.2ರಲ್ಲಿ 17.25 ಎಕರೆ ಜಮೀನು ಘನತ್ಯಾಜ್ಯ ವಿಲೆವಾರಿ ಘಟಕಕ್ಕೆ 2011ರಲ್ಲೇ ಮಂಜೂರಾಗಿ, ಪುರಸಭೆಗೆ ಹಸ್ತಾಂತರವಾಗಿದೆ.
ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಗೆ 2013ರಲ್ಲಿ 1.14 ಕೋಟಿ ವೆಚ್ಚದಲ್ಲಿ ಅನುದಾನ ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ ಉಸ್ತುವಾರಿ ಕೊರತೆಯ ಪರಿಣಾಮ ಕಾಮಗಾರಿಯ ಶೇಕಡಾ ಕಾಲು ಭಾಗ ಸಹ ಪೂರ್ಣಗೊಂಡಿಲ್ಲ. ಇನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ರಾಶಿ ರಾಚುತ್ತಿದೆ. ಆದರೆ ಸಿಬ್ಬಂದಿ ಕೊರತೆ ಪುರಸಭೆಗೆ ತೀವ್ರವಾಗಿ ಕಾಡುತ್ತಿರುವ ಕಾರಣ ಕಸ ವಿಲೇವಾರಿ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ, ಇರುವ ಅಲ್ಪಸ್ವಲ್ಪ ಸಿಬ್ಬಂದಿಯನ್ನು ನೆಚ್ಚಿಕೊಂಡು ಕಸ ವಿಲೇವಾರಿ ಮಾಡಲಾಗದೆ ದಿನದಿಂದ ದಿನಕ್ಕೆ ವಿವಿಧ ವಾರ್ಡ್‌ಗಳಲ್ಲಿ ಕಸದ ರಾಶಿ ಏರಿಕೆಯಾಗುತ್ತಾ ನಾಗರಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.