ವೃತ್ತಿ ಮೌಲ್ಯಮಾಪನಕಾರ್ಯಾಗಾರ ಮುಕ್ತಾಯ
ತುಮಕೂರು: ಇಲ್ಲಿನ ಸಿದ್ಧಾರ್ಥ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ಮೌಲ್ಯಮಾಪನ ತರಬೇತಿ ಮತ್ತು ಆಪ್ತ ಸಮಾಲೋಚನೆ ಕುರಿತು ಮೂರು ದಿನಗಳ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯವಾಯಿತು. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದಿದ್ದ 58 ಮಂದಿ ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾದ ದಿನದಿಂದ ಕೋರ್ಸ್ ಮುಗಿಸಿಕೊಂಡು ಹೋಗುವ ತನಕ ಮೇಲುಸ್ತುವಾರಿಯನ್ನು ವೆಬ್ಸೈಟ್ ಹೇಗೆ ನಿರ್ವಹಿಸಿಕೊಳ್ಳುವ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರಿಗೆ ಆಸ್ಟ್ರೇಲಿಯಾದ ಮೆಲ್ಬೊರ್ನ್ನ ಕೆರಿಯರ್ ಲೈಫ್ ಕಾಲೇಜಿನ ಸಿಇಒ ನೆಗಲ್ ಫಿಲಿಫ್ಸ್ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಕೌಶಲ್ಯಗಳು ಮತ್ತು ವೃತಿಪರತೆ ಹೆಚ್ಚಿಸಿಕೊಳ್ಳಲು ನಿಟ್ಟಿನಲ್ಲಿ ಅಧ್ಯಾಪಕರು ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ನೆಗಲ್ ಫಿಲಿಫ್ಸ್ ತರಬೇತಿ ನೀಡಿದರು. ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಸಿದ್ಧಾರ್ಥ ತಾಂತ್ರಿಕ ವಿದ್ಯಾಲಯದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎ.ಕೃಷ್ಣಮೂರ್ತಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡುವ ನಿಟ್ಟನಲ್ಲಿ ಹೊಸ ಮಾದರಿ ಅಳವಡಿಕೆ ಮತ್ತು ತಂತ್ರಜ್ಞಾನ ಸದುಪಯೋಗಪಡಿಸಿಕೊಂಡಾಗ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ತರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ, ಟೆಕ್ವಿಪ್ ಸಂಯೋಜಕ ಡಾ. ಅಶೋಕ ಮೆಹ್ತಾ ಉಪಸ್ಥಿತರಿದ್ದರು.