ಅನಾರೋಗ್ಯವೇ ಆಧುನಿಕ ಜೀವನ ಶೈಲಿಯ ಕೊಡುಗೆ
ತುಮಕೂರು: ಒತ್ತಡದಲ್ಲಿ ಬದುಕುತ್ತಿರುವ ಮನುಷ್ಯನಿಗೆ ಅದರಲ್ಲೂ ಪತ್ರಕರ್ತರಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ ಕರ್ತವ್ಯವಾಗಿದೆ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪತ್ತಿನ ಸಹಕಾರ ಸಂಘದ ಮೂರನೇ ವಾರ್ಷಿಕೋತ್ಸವ ಮತ್ತು ನಗರ ಸಹಕಾರಿ ಯಶಸ್ವಿ ಯೋಜನೆ ಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯವಿದ್ದರೆ ಮಾತ್ರ ಮನುಷ್ಯ ಏನ್ನದಾದರೂ ಸಾಧಿಸಲು ಸಾಧ್ಯ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅಧುನಿಕ ಜೀವನ ಶೈಲಿ, ಒತ್ತಡದ ಬದುಕು, ನೈಸರ್ಗಿಕ ಸಂಪನ್ಮೂಲಗಳ ಮಲೀನ ಇವೆಲ್ಲವೂ ಇಂದು ಮನುಷ್ಯನಿಗೆ ಒಂದಿಲ್ಲೊಂದು ಕಾಯಿಲೆಯನ್ನು ತಂದೊಡ್ಡುತ್ತಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ತೆರಳುವಂತಹ ಸ್ಥಿತಿಯಲ್ಲಿ ಜನರ ಅರ್ಥಿಕ ಪರಿಸ್ಥಿತಿಯಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ದೊರಕುವಂತೆ ಮಾಡಿದರು. ಅದು ಇಂದು ವಿಸ್ತಾರಗೊಂಡು ನಗರ ಸಹಕಾರಿಗಳಿಗೂ ಲಭಿಸುವಂತೆ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಇಂದು 180ಕ್ಕೂ ಹೆಚ್ಚು ಕಾಯಿಲೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳಿಗೆ 1.50 ಲಕ್ಷದಿಂದ 2 ಲಕ್ಷವರೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಗಟ್ಟಿ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೊಗಡು ವೆಂಕಟೇಶ್, ಕೆ.ಬಿ. ಚಂದ್ರಮೌಳಿ, ಸಿ.ಟಿ.ಎಸ್. ಗೋವಿಂದಪ್ಪ, ಮಲ್ಲಿಕಾರ್ಜುನ, ರಾಮಾಂಜೀನಪ್ಪ, ಬಿಂಬ ಕುಮಾರ್, ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.