ನಿಯಮ ಉಲ್ಲಂಘಿಸಿದ ಅಧಿಕಾರಿಗಳಿಗೆ ಘೇರಾವ್
ಕೊರಟಗೆರೆ: ತುಮಕೂರು ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸರ್ಕಾರದ ನಿಯಮ ಪಾಲಿಸದೆ ಜಿಲ್ಲೆಯ ಲೋಕಸಭಾ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನು ಕಡೆಗಣಿಸಿದ್ದಾರೆಂದು ಆರೋಪಿಸಿ ಸಮಾರಂಭದಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ಕೊರಟಗೆರೆ ಪಟ್ಟಣದಲ್ಲಿ ನಡೆಯಿತು.
ತುಮಕೂರು ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ತಾಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ರಾಜು, ಶಾಸಕ ಪಿ.ಆರ್.ಸುಧಾಕರಲಾಲ್, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇಲಾಖಾ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ.ಜಯಚಂದ್ರ ಹಾಗೂ ಸಂಸದ ಎಸ್.ಬಿ. ಮುದ್ದಹನುಮೇಗೌಡ ಅವರನ್ನು ಆಹ್ವಾನ ಪತ್ರಿಕೆಯಿಂದ ಕೈ ಬಿಡಲಾಗಿತ್ತು. ಇದರಿಂದ ಕುಪಿತರಾದ ಜಿಪಂನ ಕಾಂಗ್ರೆಸ್ ಸದಸ್ಯರಾದ ನಾರಾಯಣಮೂರ್ತಿ, ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಕೆಲವು ಮುಖಂಡರು ಕಾರ್ಯಕ್ರಮದ ವೇದಿಕೆ ಮುಂದೆ ಆಗಮಿಸಿ ಘೇರಾವ್ ಹಾಕಿದರು.
ಸಮಾರಂಭವು ಪಟ್ಟಣದ 14ನೇ ವಾರ್ಡ್‌ನ ಸರ್ಕಾರಿ ಪಪೂ ಕೈಲೇಜು ಮೈದಾನದಲ್ಲಿ ನಡೆಯುತ್ತಿದ್ದರೂ ಈ ವಾರ್ಡ್‌ನ ಸದಸ್ಯ ಹಾಗೂ ಪಪಂ ಅಧ್ಯಕ್ಷ ದಲಿತ ವರ್ಗಕ್ಕೆ ಸೇರಿದ ಅಶ್ವತ್ಥಪ್ಪ ಅವರನ್ನು ಸಹ ಆಹ್ವಾನ ಪತ್ರಿಕೆಯಿಂದ ಕೈ ಬಿಡಲಾಗಿತ್ತು. ಇದು ಪ್ರತಿಭಟನೆ ಮತ್ತಷ್ಟು ತಾರಕಕ್ಕೇರುವಂತೆ ಮಾಡಿತು. ನಂತರ ತಾಪಂ ಕಚೇರಿ ಮುಂಭಾಗ ಪ್ರತಿಭಟಿಸಿ ಸರ್ಕಾರದ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.