ಬೆಟ್ಟ ಹತ್ತಲಾಗದೇ ಪೊದೆಯಲ್ಲಿ ಬಿದ್ದ!
ಮಧುಗಿರಿ: ವಿಶ್ವದ ಎರಡನೇ ಅತಿ ಎತ್ತರದ ಏಕಶಿಲಾ ಬೆಟ್ಟವಾದ ಮಧುಗಿರಿ ಬೆಟ್ಟ ಹತ್ತಲು ಹೋಗಿದ್ದ ದೆಹಲಿ ಮೂಲದ ಯುವಕ ಬೆಟ್ಟದಿಂದ ಬಿದ್ದಿದ್ದು, ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೇ ವೇಳೆ, ಈತನ ಸ್ನೇಹಿತ ಅರ್ಧ ಬೆಟ್ಟ ಹತ್ತಿ ಹೆದರಿ ಕೆಳಗಿಳಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಬೆಂಗಳೂರು ನಿವಾಸಿ ಗೌರವ್(22) ಬೆಟ್ಟದಿಂದ ಬಿದ್ದು ಗಾಯಗೊಂಡಿರುವ ಯುವಕ. ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದು, ತಡರಾತ್ರಿವರೆಗೂ ಕಾರ್ಯಾಚರಣೆ ಮುಂದುವರೆದಿತ್ತು. ಆತನ ಬಳಿ ಮೊಬೈಲ್ ಇರುವ ಕಾರಣ, ನಿರಂತರ ಸಂಪರ್ಕದಲ್ಲಿರುವ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಗೌರವ್ ಬದುಕಿರುವುದನ್ನು ಖಚಿತಪಡಿಸಿದ್ದಾರೆ.
ಏನಿದು ಘಟನೆ?: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೌರವ್ ಹಾಗೂ ಎಚ್‌ಎಎಲ್‌ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ್ ಇಬ್ಬರೂ ಭಾನುವಾರ ಬೆಂಗಳೂರಿನಿಂದ ಹೊರಟು ಮಧುಗಿರಿಗೆ ಮಧ್ಯಾಹ್ನ ಬೆಟ್ಟ ಏರಲು ಮುಂದಾಗಿದ್ದಾರೆ. ಆದರೆ, ಪ್ರಿಯಾಂಕ್ ಬೆಟ್ಟ ಹತ್ತಲು ಸಾಧ್ಯವಿಲ್ಲದೆ ಅರ್ಧದಿಂದ ಕೆಳಗಿಳಿದಿದ್ದಾನೆ. ಗೌರವ್ ತಾನೊಬ್ಬನೇ ಬೆಟ್ಟ ಹತ್ತುವುದಾಗಿ ಹೋಗಿದ್ದಾನೆ. ರಾತ್ರಿ ಎಷ್ಟು ಹೊತ್ತಾದರೂ ಸ್ನೇಹಿತ ಬೆಟ್ಟ ಇಳಿಯಲಿಲ್ಲ ಎಂದು ಪ್ರಿಯಾಂಕ್ ಕಾಯುತ್ತಾ ಕುಳಿತಿದ್ದ. ಅಷ್ಟರಲ್ಲಿ ಕರೆ ಮಾಡಿದ ಗೌರವ್, ಬೆಟ್ಟ ಹತ್ತಿ ಆಯಾಸವಾಗಿದ್ದ ಕಾರಣ, ದಾರಿ ಕಾಣದೆ ಬೆಟ್ಟದ ಮೇಲಿಂದ ಪೊದೆಯೊಂದರಲ್ಲಿ ಬಿದ್ದಿದ್ದೇನೆ. ದಾರಿ ತಿಳಿಯುತ್ತಿಲ್ಲ ಎಂದು ಹೇಳಿದ್ದಾನೆ. ಸುದ್ದಿ ತಿಳಿದ ಪ್ರಿಯಾಂಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ರಾತ್ರಿ 9 ಗಂಟೆ ನಂತರ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಆತ ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾನೆ. ಚೆನ್ನಾಗಿ ಮಾತನಾಡುತ್ತಿದ್ದು, ಸಣ್ಣಪುಟ್ಟ ಗಾಯಗಳಾಗಿರಬಹುದು ಹಾಗೂ ಬೆಟ್ಟ ಹತ್ತಿದ ಕಾರಣ ಆಯಾಸವಾಗಿ ದಾರಿ ತಿಳಿಯದೆ ಘಟನೆ ಸಂಭವಿಸಿದೆ.
ಟವರ್ ಲೊಕೇಷನ್ ಪತ್ತೆ ಮಾಡುತ್ತಿದ್ದು, ಶೀಘ್ರದಲ್ಲಿ ಮೇಲೆತ್ತಲಾವುಗುವುದು ಎಂದರು.