ಹೈನುಗಾರಿಕೆಯಲ್ಲಿ ತಾಂತ್ರಿಕತೆ ಇರಲಿ
ತುರುವೇಕೆರೆ: ಹೈನುಗಾರಿಕೆ ಆರ್ಥಿಕತೆಯನ್ನು ಉತ್ತಮಪಡಿಸಿಕೊಳ್ಳುವ ವಿಧಾನವಾಗಿದೆ. ಇದಕ್ಕೆ ಮತ್ತಷ್ಟು ತಾಂತ್ರಿಕತೆಯನ್ನು ಮೈಗೂಡಿಸಿಕೊಂಡಲ್ಲಿ ರೈತರು ಸುಖಿ ಜವನ ನಡೆಸಲು ಅನುಕೂಲವಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ಹೆಗ್ಗರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯಿಂದ ಸಾಕಷ್ಟು ಕುಟುಂಬಗಳು ಸುಖಿ ಕುಟುಂಬಗಳಾಗಿವೆ. ಸರ್ಕಾರಗಳೂ ಸೂಕ್ತ ಸಹಕಾರ ನೀಡುತ್ತಿವೆ. ಸದ್ಯ ಹಾಲಿಗೂ ಉತ್ತಮ ಬೆಲೆ ಸಿಗುತ್ತಿದೆ. ಆದ್ದರಿಂದ ರೈತರು ಹೈನುಗಾರಿಕೆಗೆ ಮಹತ್ವ ನೀಡಿ ಇದನ್ನು ಉದ್ಯಮವನ್ನಾಗಿಸಿಕೊಳ್ಳುವುದು ಸೂಕ್ತ ಎಂದರು. ಗ್ರಾಮಾಂತರ ಪ್ರದೇಶದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ಸಂದರ್ಭದಲ್ಲಿ ಆಯೋಜಿಸಿದ ಚಿನ್ಮಯಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಎಚ್.ಆರ್.ಮಲ್ಲಿಕಾರ್ಜುನ್ ಸೇವೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಶ್ಲಾಘಿಸಿದರು. ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎ.ಆರ್. ಚಂದ್ರಶೇಖರ್ ಮಾತನಾಡಿ, ಈಗಾಗಲೇ ಹಾಲು ಒಕ್ಕೂಟ ರೈತರನ್ನು ಹೈನುಗಾರಿಕೆಗೆ ಪ್ರೋತ್ಸಾಹಿಸುತ್ತಿದೆ. ಸದ್ಯ ಶೇ.93ರಷ್ಟು ಗುಣಮಟ್ಟದ ಹಾಲು ಸಂಗ್ರಹ ಮಾಡಲಾಗುತ್ತಿದೆ. ರೈತರಿಂದ ಸಂಗ್ರಹಿಸುವ ಹಾಲನ್ನು ಮಾರುಕಟ್ಟೆಯಲ್ಲಿ ಕನಿಷ್ಠ 180 ದಿನಗಳವರೆಗೂ ಕೆಡದಂತೆ ಕಾಪಾಡುವ ಫ್ಲೆಕ್ಸಿ ಪ್ಯಾಕ್ನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ, ಬೆಂಗಳೂರಿನ ಚಿನ್ಮಯಿ ಎಜುಕೇಷನ್ ಟ್ರಸ್ನ ಅಧ್ಯಕ್ಷ ಮಲ್ಲಿಕಾರ್ಜುನ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ಮಹಲಿಂಗಯ್ಯ, ಎಪಿಎಂಸಿ ನಿರ್ದೇಶಕ ಕೊಂಡಜ್ಜಿ ವಿಶ್ವನಾಥ್, ಶಂಕರೇಗೌಡ, ಜಿಪಂ ಸದಸ್ಯ ಎ.ಬಿ.ಜಗದೀಶ್, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ವಿವೇಕಾನಂದ ಶೆಟ್ಟಿ, ಸಹಾಯಕ ಚಿಕ್ಕಗಂಗಯ್ಯ, ಗೋವಿಂದಯ್ಯ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ಎಲ್. ಪ್ರಕಾಶಯ್ಯ ವಹಿಸಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ: ಚಿನ್ಮಯಿ ಎಜುಕೇಷನ್ ಟ್ರಸ್ಟ್ ವತಿಯಿಂದ ಹೆಗ್ಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ವೈದ್ಯರು ರೋಗಿಗಳ ಪರೀಕ್ಷೆ ನಡೆಸಿದರು.