ಬೈಕ್‌ಗೆ ಲಾರಿ ಡಿಕ್ಕಿ: ಶಿಕ್ಷಕ ಸಾವು
ಮಧುಗಿರಿ: ಲಾರಿ ಬೈಕ್ ಸವಾರನಿಗೆ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಮೈದನಹಳ್ಳಿ ಸಮೀಪ ನಡೆದಿದೆ. ಎಂ.ಪ್ರದೀಪ್ ಕುಮಾರ್(33) ಮೃತಪಟ್ಟವರು. ಇವರು ಕೊಡಿಗೇನಹಳ್ಳಿಯಿಂದ ಸುದ್ದೇಕುಂಟೆ ಗ್ರಾಮಕ್ಕೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ವಿದ್ಯಾ(28) ಆಕೆ ಕೂಡ ಅದೇ ಮಾರ್ಗದ ಮೈದನಹಳ್ಳಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ ಶಾಲೆಗೆಂದು ತನ್ನ ಒಂದುವೂರೆ ವರ್ಷದ ಮಗು ಎತ್ತಿಕೊಂಡು ಮೂವರು ತೆರಳುತ್ತಿದ್ದಾಗ ಮೈದನಹಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಪತ್ನಿ ವಿದ್ಯಾಗೆ ಬಲವಾದ ಪೆಟ್ಟು ಬಿದ್ದಿದ್ದು ಬೆಂಗಳೂರಿನ ನಿಮ್ಹಾನ್ಸ್‌ಗೆ ಸೇರಿಸಲಾಗಿದೆ. ಮಗುವಿಗೆ ಯಾವುದೇ ತೊಂದರೆ ಆಗಿಲ್ಲ. ಇವರು ಹಾಸನ ಜಿಲ್ಲೆ ಹೊಳೇನರಸೀಪುರದ ಎನ್ನಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಅಪಘಾತ: ಸವಾರನಿಗೆ ಗಾಯ
ಮಧುಗಿರಿ: ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದ ಘಟನೆ ಸಮೀಪದ ಬಸವನಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ(28) ಎಂಬಾತನೇ ಕಾಲು ಮುರಿತಕ್ಕೆ ಒಳಗಾಗಿದ್ದು, ಈತ ಬೈಕಿನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬರುತ್ತಿದ್ದ ಬಸ್ ನೇರವಾಗಿ ಬೈಕ್‌ಗೆ ಡಿಕ್ಕಿ ಹೊಡೆಯಿತು. ಆ ರಭಸಕ್ಕೆ ಬೈಕ್ ಸವಾರನ ಕಾಲು ಮುರಿದಿದ್ದು ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್‌ಆರ್ಟಿಸಿ ಬಸ್ ಚಾಲಕರು ಗ್ರಾಮಗಳ ಸಮೀಪ ವಾಹನಗಳನ್ನು ನಿಧನವಾಗಿ ಚಲಿಸದೇ ಅಡ್ಡಾದಿಡ್ಡಿಯಾಗಿ ಓಡಿಸುತ್ತಾರೆ. ಹಾಗಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಬಸವನಹಳ್ಳಿ ಗ್ರಾಮಸ್ಥರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ರಸ್ತೆ ತೆರವು ಗೊಳಿಸಿದರು.
ದನ ತಿವಿದು ಮಹಿಳೆ ಸಾವು
ಹೆಬ್ಬೂರು: ದನ ತಿವಿದು ಮಹಿಳೆ ಸಾವನ್ನಪ್ಪಿದ ಘಟನೆ ಹೆಬ್ಬೂರು ಹೋಬಳಿಗೆ ಸೇರಿದ ಬಿದನಗೆರೆ ಮಜರೆ ಗವಿಯಪ್ಪನಪಾಳ್ಯದಲ್ಲಿ ನಡೆದಿದೆ. ತಿಮ್ಮಕ್ಕ(55) ಮೃತಪಟ್ಟ ದುರ್ದೈವಿ. ಈಕೆ ದನ ಮೇಯಿಸಲು ಹೋದಾಗ ಕಾಡು ಹಂದಿಯೊಂದು ಎದುರಿಗೆ ಬಂತು. ಗಾಬರಿಗೊಂಡ ತಿಮ್ಮಪ್ಪ ಹೆದರಿ ಹಿಂದಕ್ಕೆ ಓಡಿದಾಗ ದನ ತನ್ನ ಕೊಂಬಿನಿಂದ ತಿವಿದಿದ್ದರಿಂದ ಸಾವನ್ನಪ್ಪಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಈಕೆಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.