ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ: ರಾಜಣ್ಣ
ಕ.ಪ್ರ. ವಾರ್ತೆ ಟ ತುಮಕೂರು ಟ ಜೂ.24
ಗ್ರಾಮೀಣ ಪ್ರದೇಶದ ಭೂ ರಹಿತ ಕಾರ್ಮಿಕರಿಗೆ ಹಾಗೂ ವಿವಿಧ ರೀತಿಯ ಕಸುಬು ಮಾಡುತ್ತಿರುವ ಸಾಮಾನ್ಯರಿಗೆ ಆರ್ಥಿಕ ನೆರವು ನೀಡಲು ಡಿಸಿಸಿ ಬ್ಯಾಂಕ್ ಸಿದ್ಧ ಎಂದು ಅಧ್ಯಕ್ಷ ಹಾಗೂ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಅವರು ತುಮಕೂರು ತಾಲೂಕು ನಿಡವಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭದ್ರತಾ ಕೊಠಡಿ ಹಾಗೂ ಆಡಳಿತ ಮಂಡಳಿಯ ಸಭಾಗೃಹ ಉದ್ಘಾಟಿಸಿ ಮಾತನಾಡಿದರು. ಜಂಟಿ ಬಾಧ್ಯತಾ ಗುಂಪುಗಳ ಮೂಲಕ ಸಾಲ ಸೌಲಭ್ಯವನ್ನು ನೀಡುವ ಬೃಹತ್ ಯೋಜನೆಯನ್ನು ಡಿಸಿಸಿ ಬ್ಯಾಂಕ್ ಆರಂಭಿಸಿದೆ. ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.
ರಾಜಕೀಯ ಬೇಡ: ಮುಖ್ಯ ಅತಿಥಿಗಳಾಗಿ ಮಾತನಾಡಿದ ತುಮಕೂರು ನೂತನ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ತರದೆ ಎಲ್ಲರೂ ಸಹಕಾರ ಮನೋವೃತ್ತಿಯಿಂದ ಕಾರ್ಯ ಮಾಡಿದರೆ ಗ್ರಾಮೀಣಾಭಿವೃದ್ಧಿ ಸಾಧ್ಯವೆಂದರು.
ಸಂಘವನ್ನು ಪುನಶ್ಚೇತನಗೊಳಿಸಿ ವಿವಿಧ ರೀತಿಯ ಚಟುವಟಿಕೆಗಳನ್ನು ಕೈಗೊಂಡಿರುವ ನಿಡವಳಲು ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎನ್.ವಿ. ಲಕ್ಷ್ಮೀಕಾಂತ ಮತ್ತು ತಂಡದವರನ್ನು ಅಭಿನಂದಿಸಿದರು. ಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಕ್ಷೀರಭಾಗ್ಯ ಯೋಜನೆಗೆ ತುಮಕೂರು ಹಾಲು ಒಕ್ಕೂಟ ಎಲ್ಲ ಸಹಕಾರ ನೀಡುತ್ತಿದ್ದು, ರೈತರು ಹೈನುಗಾರಿಕೆಯನ್ನು ಒಂದು ಉಪಕಸುಬಾಗಿ ಕೈಗೆತ್ತಿಕೊಂಡು, ತಮ್ಮ ಆರ್ಥಿಕ ಉನ್ನತಿಯನ್ನು ಸಾಧಿಸಿಕೊಳ್ಳಲು ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ನಿಡವಳಲು ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಎನ್.ವಿ. ಲಕ್ಷ್ಮೀಕಾಂತ್, ಕಳೆದ 5 ವರ್ಷಗಳಲ್ಲಿ ಕಷ್ಟದಲ್ಲಿದ್ದ ಸಹಕಾರ ಸಂಘವನ್ನು ಅಭಿವೃದ್ಧಿಗೊಳಿಸಿ 2013-14 ನೇ ಸಾಲಿನಲ್ಲಿ 5.38 ಲಕ್ಷ ರು.ಗಳಷ್ಟು ನಿವ್ವಳ ಲಾಭ ಗಳಿಸಿದೆ. ಈ ಎಲ್ಲ ಪ್ರಗತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರ ಪ್ರೋತ್ಸಾಹ, ಮಾರ್ಗದರ್ಶನ, ಆರ್ಥಿಕ ನೆರವು ಕಾರಣ ಎಂದರು.
ಡಿಸಿಸಿ ಬ್ಯಾಂಕ್ ಎಂಡಿ ಟಿ.ವಿ. ನರಸಿಂಹಮೂರ್ತಿ, ಬ್ಯಾಂಕ್ ನಿರ್ದೇಶಕರಾದ ಬಿ.ಸಿ. ಉಮೇಶ್, ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಗಂಗಣ್ಣ, ತಾರಾದೇವಿ, ಸಂಘದ ಎಲ್ಲ ನಿರ್ದೇಶಕರು, ಮುಖಂಡರು, ಡಿಸಿಸಿ ಬ್ಯಾಂಕ್ ಮೇಲ್ವೀಚಾರಕ ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಓಂಕಾರಮೂರ್ತಿ ಸಂಘದ ಪ್ರಗತಿ ವಾಚಿಸಿದರು. ಹಿರಿಯ ಸಹಕಾರಿ ಸಲಹೆಗಾರ ಶಂಕರ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.