ಮೂಲ ವೇತನ, ತುಟ್ಟಿಭತ್ಯೆ: ಸರ್ಕಾರ ಆದೇಶ ಹೊರಡಿಸಲಿ
ತುಮಕೂರು: ಮೂಲ ವೇತನ, ತುಟ್ಟಿಭತ್ಯೆ ಕುರಿತು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದರು.
1984 ರ ನಂತರ ನೇಮಕಗೊಂಡ ದಿನಗೂಲಿ ನೌಕರರಿಗೆ ರಾಜ್ಯ ಸರ್ಕಾರ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ಅನ್ನು ಶೀಘ್ರವಾಗಿ ಜಾರಿಗೊಳಿಸುವ ಸಂಬಂಧ ಅರ್ಹ ದಿನಗೂಲಿ ನೌಕರರ ಹೆಸರು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಲ್ಲಿ ಪ್ರಕಟಿಸಬೇಕೆಂದು ನೌಕರರು ಪ್ರತಿಭಟನೆ ನಡೆಸಿದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮೇರೆಗೆ ದಿನಗೂಲಿಯಿಂದ ಕಾಯಂಗೊಂಡ ನೌಕರರಿಗೆ ಅವರು ಕಾಯಂಗೊಳ್ಳುವ ಮೊದಲು ಸಲ್ಲಿಸಿದ್ದ ಹತ್ತು ವರ್ಷಗಳ ಸೇವೆಯನ್ನು ನಿವೃತ್ತ ಸೌಲಭ್ಯಗಳಿಗೆ ಪರಿಗಣನೆ ಮಾಡಬೇಕು ಎಂದಿದ್ದಾರೆ.
ಕೋರ್ಟ್ 2006 ರಲ್ಲಿ ದೃಢಪಡಿಸಿದ ತೀರ್ಪಿನಂತೆ ಎಲ್ಲರಿಗೂ ವಿಸ್ತರಿಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳು ಜುಲೈ 7 ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯದ ಲಕ್ಷಾಂತರ ದಿನಗೂಲಿ ಹಾಗೂ ಕಾಯಂಗೊಂಡ ನೌಕರರಿಂದ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಧರಣಿಯಲ್ಲಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಜಿಲ್ಲಾ ಅಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಶಶಿಕುಮಾರ್, ಸೋಮಶೇಖರ್, ಗುರುಮೂರ್ತಿ, ಸಿದ್ದೇಶ್, ರಾಮಮೂರ್ತಿ ಸೇರಿದಂತೆ ಜಿಲ್ಲೆಯ ದಿನಗೂಲಿ ಹಾಗೂ ಕಾಯಂ ನೌಕರರು ಭಾಗವಹಿಸಿದ್ದರು.