ವಸತಿ ಸೌಲಭ್ಯ: ಜಿಲ್ಲಾ ಮಟ್ಟದ ಸಮಿತಿ ರಚನೆ
ತುಮಕೂರು: ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಈ ಕೆಳಕಂಡಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರು. ಸಿಇಒ-ಉಪಾಧ್ಯಕ್ಷರು, ವಸತಿ ನೋಡಲ್ ಅಧಿಕಾರಿ, ಜಿಪಂ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ - ಸದಸ್ಯರು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ (ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ)-ಸದಸ್ಯರು, ಉಪವಿಭಾಗಾಧಿಕಾರಿಗಳು-ಸದಸ್ಯರು, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು-ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ-ಸದಸ್ಯರು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ-ಸದಸ್ಯ ಕಾರ್ಯದರ್ಶಿಗಳು. ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿ ಅರ್ಹರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮಾಡುವುದು, ಸ್ಥಳೀಯ ಸಂಸ್ಥೆಗಳ ಅರ್ಹ ವಸತಿ ರಹಿತರ ಪಟ್ಟಿಯನ್ನು ಕ್ರೋಡೀಕರಿಸಿ, ಈ ಪಟ್ಟಿಯನ್ನು ಪ್ರಚುರಪಡಿಸಿ ಅರ್ಜಿ ಆಕ್ಷೇಪಣೆಗಳನ್ನು ಜುಲೈ 15ರೊಳಗೆ ಆಹ್ವಾನಿಸುವುದು. ಅರ್ಜಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಜುಲೈ ಅಂತ್ಯದೊಳಗೆ ಅಂತಿಮವಾಗಿ ಅರ್ಹ ವಸತಿ ರಹಿತರ ಪಟ್ಟಿ ಸಿದ್ಧಪಡಿಸುವುದು, ಆಗಸ್ಟ್ ಅಂತ್ಯಕ್ಕೆ ಈ ಪಟ್ಟಿಯನ್ನು ಜಿಲ್ಲಾ ಸಮಿತಿಯಲ್ಲಿ ಅನುಮೋದಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು ಸಮಿತಿ ಜವಾಬ್ದಾರಿ.