ಸಮಾಧಿ ಕಿತ್ತ ವಿವಾದ: ಠಾಣೆ ಮುತ್ತಿಗೆ
ಹುಳಿಯಾರು: ಜಮೀನಿನಲಿದ್ದ ಸಮಾಧಿಯೊಂದನ್ನು ಕಿತ್ತು ಹಾಕಿರುವ ವಿಚಾರ ವಿವಾದಕ್ಕೀಡಾಗಿದ್ದು ಈ ಕುರಿತು ಸಮಾಧಿ ಕಿತ್ತವರನ್ನು ಬಿಟ್ಟು 9 ಮಂದಿ ಅಮಾಯಕರ ಮೇಲೆ ಕೇಸ್ ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಬಡಕೆಗುಡ್ಲು ಗ್ರಾಮಸ್ಥರು ಗುರುವಾರ ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಎಸ್‌ಐ ಸಿದ್ದವೀರಪ್ಪ ಎಂಬವರು ಬಡಕೆಗುಡ್ಲು ಗ್ರಾಮದಲ್ಲಿ ಜಮೀನಿನನ್ನು ಖರೀದಿಸಿದ್ದು ಅವರು ನಿಧನದ ನಂತರ ಅಲ್ಲಿಯೇ ಅವರ ಪಾರ್ಥೀವ ಶರೀರವನ್ನು ಸಮಾಧಿ ಮಾಡಲಾಗಿತ್ತು. ನಾಲ್ಕೈದು ದಿವಸಗಳ ಹಿಂದೆ ಈ ಸಮಾಧಿಯನ್ನು ಕಿತ್ತು ಹಾಕಿರುವುದು ವಿವಾದಕ್ಕೆ ಎಡೆ ಮಾಡಿದ್ದು, ಠಾಣೆ ಮೆಟ್ಟಿಲೇರಿದೆ.
7 ವರ್ಷಗಳ ಹಿಂದೆ ನಿಧನ ಹೊಂದಿದ್ದ ತಮ್ಮ ತಂದೆಯ ಸಮಾಧಿಯನ್ನು ನಾಲ್ಕೈದು ದಿವಸಗಳ ಹಿಂದೆ ಕೀಳಲಾಗಿದೆ ಎಂದು ಅವರ ಪುತ್ರ ಮೂಲತಃ ತುಮಕೂರಿನ ವಾಸಿ ನಾಗರಾಜಗೌಡ ಅರೋಪಿಸಿದ್ದಾರೆ. ಬಡಕೆಗುಡ್ಲು ಗ್ರಾಮದ ಅನಂತಕುಮಾರ್, ರಾಜಪ್ಪ, ಬಿ.ಪಿ.ರಂಗಸ್ವಾಮಿ, ತಿಮ್ಮರಾಜು, ಬಿ.ಎ.ನಾಗರಾಜು, ಸಣ್ಣಕಾಮಯ್ಯ, ಬಿ.ಜಿ.ರಾಜಪ್ಪ, ಗೋವಿಂದರಾಜು, ಮುದ್ದಯ್ಯ ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಇದನ್ನು ವಿರೋಧಿಸಿ ಮುಖಂಡ ಬಿ.ಆರ್.ರಂ.ಗನಾಥ್ ನೇತೃತ್ವದಲ್ಲಿ ಠಾಣೆಗೆ ಧಾವಿಸಿ ಪ್ರತಿಭಟನೆ ನಡೆಸಿದರು. ಠಾಣೆಯಲ್ಲಿ ದೂರು ದಾಖಲಾಗಿರುವವರೆಲ್ಲಾ ಅಮಾಯಕರು. ಸಮಾಧಿ ಕಿತ್ತು ಹಾಕಿಲ್ಲ. ಆದರೂ ಅವರ ಮೇಲೆ ಪೊಲೀಸರು ಒತ್ತಡದಿಂದ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೇ ಗ್ರಾಮ ತೊರೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಿ.ಎನ್.ಕೃಷ್ಣಮೂರ್ತಿ, ಬಿ.ಎನ್. ಗೋಪಾಲಯ್ಯ, ಬಿ.ಟಿ.ಚಂದನ್ ಸೇರಿದಂತೆ ಮತ್ತಿತರರು ಇದ್ದರು.