ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹುಲ್ಲು ಮೇಯುತ್ತಿರುವ ಟಿಬಿಜೆ

Mainashree
Updated On : 26 Jun 2014, 10:50 am

ತಿಪಟೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಸುಣ್ಣವಾಗಿದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಠಾಣೆಗಳಲ್ಲಿ ಎಂಥವರನ್ನೂ ನಾಚಿಸುವಂಥ ಲಂಚಕೋರತನಕ್ಕೆ ಪೊಲೀಸ್ ಅಧಿಕಾರಿಗಳು ಇಳಿದಿದ್ದು, ಸಾಮಾನ್ಯ ಜನರ ರಕ್ಷಣೆಗಾಗಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆ ಎಂದು ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಪೊಲೀಸ್ ದೌರ್ಜನ್ಯಕ್ಕೆ ಬಲಿಯಾಗಿದ್ದಾನೆ ಎನ್ನಲಾದ ಕಿರಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಹತ್ಯಾಳು ಗ್ರಾಮದ ಬಳಿಯ ಎನ್‌ಎಚ್- 206ರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ರಸ್ತೆ ತಡೆಯಲ್ಲಿ ಅವರು ಮಾತನಾಡಿದರು. ಕಿರಣ್ ಸಾವಿಗೆ ನೇರವಾಗಿ ತಿಪಟೂರು ಎಎಸ್‌ಪಿ ಕಾರ್ತಿಕ್ ರೆಡ್ಡಿಯ ಬೇಜವಾಬ್ದಾರಿ ವರ್ತನೆ ಮತ್ತು ಅಹಂಕಾರವೇ ಕಾರಣ. ಈ ಘಟನೆಯ ತನಿಖೆ ನಿಷ್ಪಕ್ಷವಾಗಿ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮೃತ ಕಿರಣ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಜಿಲ್ಲಾ ಮಂತ್ರಿ ಜಯಚಂದ್ರ ರೈತನ ಸಾವಿಗೆ ತಲೆ ಕೆಡಿಸಿಕೊಳ್ಳದೆ ಹುಲ್ಲು ಗಾವಲು ಮತ್ತು ಗೋಮಾಳಗಳನ್ನು ಉದ್ಯಮಿಗಳಿಗೆ ಮಾರಿ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ. ಘಟನೆ ಬಗ್ಗೆ ನನಗೇನೂ ತಿಳಿದಿಲ್ಲ ಎಂಬ ಮಂತ್ರಿಗಳ ಹೇಳಿಕೆ ಸರ್ಕಾವೇ ತಲೆ ತಗ್ಗಿಸುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, 'ಅಮಾಯಕ ರೈತ ಕಿರಣ್ ಸಾವಿನ ಬಗ್ಗೆ ಮಾಧ್ಯಮಗಳು ಕಳೆದ 10 ದಿನಗಳಿಂದಲೂ ವರದಿ ಮಾಡುತ್ತಿವೆ. ಆದರೂ ಜಿಲ್ಲಾ ಮಂತ್ರಿ ಜಯಚಂದ್ರ ಅವರು ಘಟನೆ ಬಗ್ಗೆ ನನಗೇನೂ ತಿಳಿದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡು. ಒಬ್ಬ ಅಮಾಯಕ ರೈತರ ಕೊಲೆಯೇ ಜಿಲ್ಲಾ ಮಂತ್ರಿಗೆ ತಿಳಿದಿಲ್ಲವೆಂದ ಮೇಲೆ ಜಿಲ್ಲೆಯ ಜನಸಾಮಾನ್ಯರ ಗತಿ ಏನೆಂದು ಪ್ರಶ್ನಿಸಿದರು. ಶುಕ್ರವಾರ ಆರಂಭವಾಗಿರುವ ಪ್ರತಿಭಟನೆಗೆ ಶನಿವಾರಕ್ಕೆ ಉಗ್ರ ಸ್ವರೂಪ ನೀಡಲಾಗುವುದು. ಅಲ್ಲದೆ, ಬೈಕ್ ರ್ಯಾಲಿ ಮತ್ತು ಉಪವಿಭಾಗಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಹೆಚ್ಚಿನ ಸಂಖ್ಯೆ ಜನರು, ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ, ದಲಿತ ಮುಖಂಡ ರಘುಪತಿ, ತಾಲೂಕು ಮುಖಂಡ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, 'ಎಎಸ್ಪಿ ಕಾರ್ತಿಕ್ ರೆಡ್ಡಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ನಂತರ 10 ನಿಮಿಷಗಳ ಕಾಲ ಎನ್‌ಎಚ್- 206 ರಲ್ಲಿ ಸಾಂಕೇತಿಕ ರಸ್ತೆ ತಡೆ ಮಾಡಿದರು. ಪ್ರತಿಭಟನೆಯಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಸದಸ್ಯ ನಿಜಗುಣ, ಯದುನಂದನ, ಗಂಗಮ್ಮ, ಬಿಜೆಪಿ ಮುಖಂಡರಾದ ತಿಮ್ಮೇಗೊಡ, ಜಗದೀಶ್, ರೇಣು, ಆಲದಹಳ್ಳಿ ವಿಶ್ವನಾಥ್, ಜಗದೀಶ್, ತೀರ್ಥಕುಮಾರ್ದ್‌ಲಿತ ಮುಖಂಡರಾದ ಕುಮಾರ್, ಬಯವರಾಜು, ಕಲ್ಲೇಶ್, ಪ್ರಭುಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement