18 ಲಕ್ಷ ದರೋಡೆ: ಚಾಲಕನದ್ದೇ ಸ್ಕೆಚ್!
ತುರುವೇಕೆರೆ: ಇತ್ತೀಚೆಗೆ ಎಂಜಿನಿಯರ್ರೊಬ್ಬರಿಗೆ ಸೇರಿದ ಸ್ಕಾರ್ಪಿಯೋ ವಾಹನ ತಡೆದು 18 ಲಕ್ಷ ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದರೋಡೆ ಪ್ರಕರಣದ ಆರೋಪಿ ಸ್ಕಾರ್ಪಿಯೋ ವಾಹನ ಚಾಲಕ. ಎಂಜಿನಿಯರ್ ಸತ್ಯನಾರಾಯಣ ಅವರು ಜೂ.12ರಂದು 18 ಲಕ್ಷ ಹಣವನ್ನು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ತೆಗೆದುಕೊಂಡು ಹೊರಟಿದ್ದರು. ಇದು ಗೊತ್ತಿದ್ದು ಚಾಲಕ ಸಂತೋಷ್, ಬೆಂಗಳೂರಿನ ತನ್ನ ಐವರು ಸ್ನೇಹಿತರಿಗೆ ಈ ವಿಷಯ ತಿಳಿಸಿದ್ದಾನೆ.
ಎಂಜಿನಿಯರ್ ಹಣವನ್ನು ಅಕ್ರಮವಾಗಿ ಹೊಂದಿರುವುದಾಗಿಯೂ, ತಾವುಗಳು ದರೋಡೆ ಮಾಡಿ ಹೊತ್ತೊಯ್ದರೆ ಸತ್ಯನಾರಾಯಣ್ ದೂರು ನೀಡಲು ಸಾಧ್ಯವಾಗುವುದಿಲ್ಲ. ಅದನ್ನು ದರೋಡೆ ಮಾಡೋಣ ಎಂದು ಚಾಲಕ ತನ್ನ ಸ್ನೇಹಿತರಿಗೆ ತಿಳಿಸಿ ಸಂಚು ರೂಪಿಸಿದ್ದ. ತಮ್ಮ ಪ್ಲ್ಯಾನ್ ಪ್ರಕಾರ ಕೆ.ಬಿ.ಕ್ರಾಸ್ ಬಳಿ ಬಂದ ಚಾಲಕನ ಸ್ನೇಹಿತರು ಹಣ ದೋಚಿ ಪರಾರಿಯಾಗಿದ್ದರು.
ಘಟನೆ ನಡೆದ ಬಳಿಕ ಎಂಜಿನಿಯರ್ ಸತ್ಯನಾರಾಯಣ್ ಅವರು 8 ಲಕ್ಷ ದರೋಡೆಯಾಗಿದೆ ಎಂದು ಹೇಳಿದ್ದರು. ಆದರೆ, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಲಕ್ಷ್ಮಣ್ ಭೇಟಿ ನೀಡಿದಾಗ, ಸತ್ಯಾಂಶವನ್ನು ತಿಳಿಸಿದ್ದರು.
ಈ ಪ್ರಕರಣದಲ್ಲಿ ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಆಗ, ಸತ್ಯಾಂಶ ಬಯಲಾಗಿದೆ. ಅಂತಿಮವಾಗಿ ಪೋಲಿಸರು 6 ಮಂದಿಯನ್ನು ಬಂಧಿಸಿದ್ದಾರೆ. ತುರುವೇಕೆರೆ ಪೋಲಿಸರು ಸ್ಕಾರ್ಪಿಯೋ ವಾಹನದ ಚಾಲಕ ಸಂತೋಷ್, ಕಾರ್ತಿಕೇಯನ್ ಹಾಗೂ ಭಾಸ್ಕರ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಣಸವಾಡಿ ಪೋಲಿಸರು ಬೆಂಗಳೂರಿನ ಗಾಂಧಿ ಗ್ರಾಮದ ಸಂತೋಷ್, ಕಮ್ಮನಹಳ್ಳಿಯ ಮಹೇಶ್ ಬಾಬು ಹಾಗೂ ಬಾಬು ಪಾಳ್ಯದ ಸಂತೋಷ್ ನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ 13.73 ಲಕ್ಷ ಹಾಗೂ ಕಾರು, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಹೊಟೇಲ್ ಬೆಂಕಿಗೆ ಆಹುತಿ
ತುರುವೇಕೆರೆ: ಕೆಎಸ್ಆರ್ಟಿಸಿ ಡಿಪೋ ಮುಂಭಾಗದಲ್ಲಿದ್ದ ಸಣ್ಣ ಹೊಟೇಲ್ಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಭಸ್ಮವಾಗಿದೆ. ಈ ಹೊಟೇಲ್ ನಾರಾಯಣಪ್ಪ ಎನ್ನುವರಿಗೆ ಸೇರಿದೆ. ಶುಕ್ರವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಹೊಟೇಲ್ ಮುಂಭಾಗವೇ ಇರುವ ಡಿಪೋ ಕಾವಲುಗಾರರು ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದೆ. ಬೆಂಕಿ ಆಕಸ್ಮಿಕದಿಂದ ಸುಮಾರು 40 ಸಾವಿರ ನಷ್ಠವಾಗಿದೆ ನಷ್ಠ ಆಗಿದೆ ಎಂದು ಹೋಟೆಲ್ ನ ಮಾಲೀಕ ನಾರಾಯಣಪ್ಪ ತಿಳಿಸಿದ್ದಾರೆ.
ಬೈಕ್ ಕಳವು: 11 ತಿಂಗಳಾದ್ರೂ ದೂರು ಸ್ವೀಕರಿಸದ ಪೊಲೀಸರು!
ತಿಪಟೂರು: ಪಟ್ಟಣದ ಕೆರೆಗೋಡಿ ರಸ್ತೆಯ ವಾಸಿ ನವೀನ್ ಅವರ ಬೈಕ್ ಕಳವಾಗಿ 11 ತಿಂಗಳಾದರೂ ಇನ್ನೂ ಸಿಕ್ಕಿಲ್ಲ. ಇಲ್ಲಿನ ನಗರಠಾಣೆಯಲ್ಲಿ ಅವರ ಪ್ರಕರಣವನ್ನೇ ದಾಖಲು ಮಾಡಿಕೊಳ್ಳದೆ ಅಲೆದಾಡಿಸುತ್ತಿದ್ದಾರೆ.
2013ರ ಜುಲೈ 17ರಂದು ನವೀನ್ ಬೈಕ್ ಕಳುವಾಗಿರುವ ಬಗ್ಗೆ ನಗರಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಅಂದಿನ ಪಿಎಸ್ಐ ದೂರು ದಾಖಲಿಸಿಕೊಳ್ಳದೇ ್ಟ ನೋಡೋಣ ಎಂದಿದ್ದರು. ಮೂರ್ನಾಲ್ಕು ತಿಂಗಳಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಬಳಿಕ ಠಾಣೆಗೆ ರಾಮಕೃಷ್ಣ ಎಂಬುವವರ ಪಿಎಸ್ಐ ಆಗಿ ಬಂದಿದ್ದಾರೆ. ಅವರಿಗೆ ನವೀನ್ ದೂರು ನೀಡಲು ಮುಂದಾಗಿದ್ದಾರೆ. ಆದರೆ, ರಾಮಕೃಷ್ಣ ಅವರು, ನೀವು ಅಂದಿನ ಅಧಿಕಾರಿ ಇದ್ದಾಗಲೇ ದೂರು ದಾಖಲಿಸಬೇಕಿತ್ತು ದಬಾಯಿಸಿದ್ದಾರೆ. ಇಷ್ಟಾದರೂ ನವೀನ್ ಠಾಣೆಗೆ ಮತ್ತೆ ಎಡತಾಕಿದ್ದಾರೆ. ಕಳೆದ ವಾರ ಪೊಲೀಸರು, ನವೀನ್ಗೆ ನಿಮ್ಮ ಬೈಕ್ ಸಿಗುವ ಸಾಧ್ಯತೆಗಳಿಲ್ಲ ಎಂದು ಸಾಗಹಾಕಿದ್ದಾರೆ. ಈ ಮಧ್ಯೆ ಸತ್ಯನಾರಾಯಣ ಎಂಬುವವರು ಪಿಎಸ್ಐ ವರ್ಗವಾಗಿ ಬಂದಿದ್ದಾರೆ. ಬೈಕ್ ಮೇಲಿನ ವಿಮೆ ಪಡೆಯಲಾದರೂ ದೂರು ದಾಖಲು ಸ್ವೀಕೃತಿ ನೀಡುವಂತೆ ಕೋರಿದ್ದಾರೆ. ಇದಕ್ಕೆ ಅವರು, ನೀವು ಹಿಂದಿನ ಅಧಿಕಾರಿಗಳಿದ್ದಾಗಲೇ ದೂರು ನೀಡಬೇಕಿತ್ತು. ವಾರ ಬಿಟ್ಟು ಬಾ ಎಂದು ಹೇಳಿ ಕಳುಹಿಸಿದ್ದಾರೆ.