ಕಲ್ಪತರು ನಾಡಲ್ಲಿ ಕಂಡಕಂಡಲ್ಲಿ ಕಸ!
ತಿಪಟೂರು: ಕಲ್ಪತರು ನಾಡಾದ ತಿಪಟೂರಿನಲ್ಲಿ ಕಲ್ಪವೃಕ್ಷವಿಲ್ಲ. ಕಸವೇ ಎಲ್ಲಾ!
ತಿಪಟೂರು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಸಿಬ್ಬಂದಿ ಕೊರತೆಯಿಂದ ನಗರದ ಪ್ರಮುಖ ರಸ್ತೆ, ಗಲ್ಲಿ ಗಲ್ಲಿಗಳಲ್ಲಿ ಎಲ್ಲೆಲ್ಲೂ ಕಸದ ರಾಶಿ. ನಗರದ 32ವಾರ್ಡ್‌ಗಳ ಯಾವ ಮೂಲೆಯಲ್ಲಿ ನೋಡಿದರೂ ಕಸದರಾಶಿ ಎದ್ದು ಕಾಣುತ್ತಿದೆ. ಅಲ್ಲದೆ, ಹಂದಿ, ನಾಯಿಗಳ ತಾಣವಾಗಿವೆ. ಖಾಲಿ ನಿವೇಶನಗಳು, ಹಾಳು ಬಿದ್ದ ಕಟ್ಟಡಗಳಲ್ಲಿ, ಹೊಟೇಲ್, ಆಸ್ಪತ್ರೆ, ಕಲ್ಯಾಣ ಮಂಟಪಗಳು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳು, ಕೋಳಿ ಅಂಗಡಿಗಳ ಬಳಿ, ಕೋಡಿಸರ್ಕಲ್, ಹಾಸನ ಸರ್ಕಲ್ ಸುತ್ತಮುತ್ತ, ಬಿ.ಎಚ್.ರಸ್ತೆ ಬದಿಯ ಚರಂಡಿಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ದಿನನಿತ್ಯ ಗುಡಿಸುವ ಬೀದಿ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದುದ್ದರಿಂದ ಮಧ್ಯಾಹ್ನದೊಳಗಡೆ ಕಸ ಮತ್ತೆ ರಸ್ತೆಯಲ್ಲಿ ಚಲ್ಲಾಡಿರುತ್ತದೆ.
ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಅರ್ಧಕ್ಕೂ ಹೆಚ್ಚು ಕಸ ಉತ್ಪಾದನೆಯಾಗುವುದು ಮತ್ತು ಹೆಜ್ಜೆ ಹೆಜ್ಜೆಗೂ ಕಸದ ರಾಶಿ ಸ್ವಾಗತಿಸುವ ಪ್ರದೇಶವೆಂದರೆ ಅದು ತಿಪಟೂರಿನ ಗಾಂಧಿನಗರ.
ನಗರಸಭಾ ಪರಿಸರ ವಿಭಾಗ ಎಷ್ಟರಮಟ್ಟಿಗೆ ನಿರ್ಲಕ್ಷಿಸಿದೆ ಎಂದರೆ ಇಲ್ಲಿನ ಬಹುತೇಕ ಬಡಾವಣೆಗಳಲ್ಲಿ ಈಗಲೂ ನಾಗರಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲಿ ಮುಖ್ಯವಾಗಿ ಚರಂಡಿ, ಹಳ್ಳ ಕೊಳ್ಳಗಳೇ ಘನತ್ಯಾಜ್ಯ ವಿಲೆವಾರಿ ಘಟಕಗಳು. ಇದಕ್ಕೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.
ಸ್ವಚ್ಛತೆಗೆ ಈ ಪ್ರದೇಶದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಬಹುತೇಕ ಇಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರೇ ಹೆಚ್ಚಿದ್ದು, ಸರ್ಕಾರದ ಎಲ್ಲಾ ವಿಶೇಷ ಅನುದಾನ ಈ ಏರಿಯಾಕ್ಕೆ ಬಳಕೆಯಾಗುತ್ತಿದ್ದರೂ ಈ ಮೊದಲು ಪುರಸಭೆಯಾಗಿದ್ದಾಗ ಪರಿಸ್ಥಿತಿ ಹೇಗಿತ್ತೋ ನಗರಸಭೆಯಾದ ಮೇಲೂ ಹಾಗೇ ಇದೆ. ಕೋಟಿ ಕೋಟಿ ಅನುದಾನ ಇಲ್ಲಿಗೆ ಬಳಕೆಯಾಗುತ್ತಿದ್ದರೂ ಅಭಿವೃದ್ಧಿ, ಸ್ವಚ್ಛತೆ ಮತ್ತು ಕಸದ ವಿಲೇವಾರಿ ಮಾತ್ರ ಇಲ್ಲಿ ಶೂನ್ಯ.
ಇದೇ ಪರಿಸ್ಥಿತಿ ಹಳೇಪಾಳ್ಯ, ಮಾರನಗೆರೆ, ಗೊರಗೊಂಡನಹಳ್ಳಿ ಮುಂತಾದ ಬಡಾವಣೆಗಳಲ್ಲಿ ಇದ್ದು, ಪರಿಸರ ವಿಭಾಗ ಇಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ವಿಭಾಗಕ್ಕೆ ತುರ್ತಾಗಿ ಮೇಜರ್ ಸರ್ಜರಿ ಆಗಬೇಕಿದೆ.
ನಗರಸಭಾ ಪರಿಸರ ವಿಭಾಗದ ಎಂಜಿನಿಯರ್, ಹೆಲ್ತ್ ಇನ್ಸ್‌ಪೆಕ್ಟರ್‌ಗಳೆಲ್ಲಾ ನಗರದ ಪರಿಸರ ಸ್ವಚ್ಛತೆ, ಕಸ ವಿಲೇವಾರಿಗೆ ಆದ್ಯತೆ ನೀಡುತ್ತಿಲ್ಲ. ಕೋಟ್ಯಂತರ ಖರ್ಚು ಮಾಡಿ ನಗರದ ಹತ್ತಿರದಲ್ಲೇ ಘನತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಿದ್ದು, ಕೇವಲ ಹೆಸರಿಗಷ್ಟೆ ಇಲ್ಲಿನ ಕಾಮಗಾರಿಗಳಲ್ಲಿ ಅಭಿವೃದ್ಧಿಯಲ್ಲಿ ಲಕ್ಷಗಟ್ಟಲೆ ಹಣ ದುರುಪಯೋಗವಾಗಿದ್ದು, ಲೋಕಾಯುಕ್ತ ತನಿಖೆಗೂ ಹೋಗಿದೆ. ಪಟ್ಟಣದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗದೆ ಕೊಬ್ಬರಿ ನಗರಿ ಕಸದಿಂದ ಮುಕ್ತಿ ಪಡೆಯಲಾಗದೆ ಕಸದ ನಗರಿಯಾಗಿ ಗುರ್ತಿಸಿಕೊಳ್ಳುವಲ್ಲಿ ಮುಂದಾಗುತ್ತಿದೆ.
-ರಂಗಸ್ವಾಮಿ