ಶೋಕಾಸ್ ನೊಟೀಸ್ ನೀಡುವ ಎಚ್ಚರಿಕೆ
ತುಮಕೂರು: ಇನ್ನು ಎರಡು ದಿವಸದೊಳಗೆ ಶಾಲೆಗೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ವಿಫಲರಾದರೆ ಶೋಕಾಸ್ ನೊಟೀಸ್ ನೀಡುವುದಾಗಿ ಜಿಪಂ ಸಿಇಒ ಗೋವಿಂದರಾಜು ಎಚ್ಚರಿಸಿದ್ದಾರೆ.
ಇಲ್ಲಿನ ಡಯಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶಾಲೆಯಿಂದ ಹೊರಗುಳಿಯುವ ಮಕ್ಕಳು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಮಕ್ಕಳಿಗೆ ಶಿಕ್ಷಣ ಹಕ್ಕನ್ನು ಕೊಡಿಸುವ ಮೂಲಕ ಅವರು ಎಲ್ಲಾ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು. ಹೀಗಾಗಬೇಕಾದಲ್ಲಿ ಅಧಿಕಾರಿಗಳು ಮಕ್ಕಳನ್ನು ಆಸಕ್ತಿಯಿಂದ ಶಾಲೆಗೆ ಕರೆತರುವ ಕೆಲಸ ಮಾಡಬೇಕಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
2013-14 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಸಮೀಕ್ಷೆ ಕೈಗೊಳ್ಳಲಾಗಿದ್ದು, ಅದರನ್ವಯ ತುಮಕೂರು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ 861 ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು. ಇನ್ನು ಎರಡು ದಿನದೊಳಗಾಗಿ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಧುಗಿರಿ ಹಾಗೂ ತುಮಕೂರು(ದ) ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 2003 ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗಿದ್ದು, 1142 ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲಾಗಿದೆ. ಆದರೆ ಉಳಿದ 861 ಮಕ್ಕಳನ್ನು ಜೂ.28 ರೊಳಗಾಗಿ ಕಡ್ಡಾಯವಾಗಿ ಶಾಲೆಗೆ ದಾಖಲಿಸುವಂತೆ ತಾಕೀತು ಮಾಡಿದರು. ಸಭೆಯಲ್ಲಿ ಉಭಯ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳು, ಎಲ್ಲಾ ತಾಲೂಕುಗಳ ಬಿ.ಇ.ಓ.ಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್ ಉಪಸ್ಥಿತರಿದ್ದರು.
ಇನ್ನೂ 740 ಮಕ್ಕಳು
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 1406 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, 664 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ. 740 ಮಕ್ಕಳನ್ನು ಶಾಲೆಗೆ ಕರೆತರಬೇಕಿದೆ.
ಅಂತೆಯೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 599 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದು, 478 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ. 121 ಮಕ್ಕಳನ್ನು ಶಾಲೆಗೆ ಕರೆತರಬೇಕಿದೆ. ಈ ನಿಟ್ಟಿನಲ್ಲಿ ಡಿಡಿಪಿಐಗಳು ಪ್ರತಿ ದಿನ ಸಂಜೆ ಪರಿಶೀಲನಾ ಸಭೆ ಮಾಡುವ ಮೂಲಕ ಈ 861 ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ತಿಳಿಸಿದರು. 1142 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿರುವುದು ಸರಿಯಷ್ಟೆ. ಆದರೆ ಈ ಮಕ್ಕಳು ನಿರಂತರವಾಗಿ ಶಾಲೆಗೆ ಬರುವಂತೆ ಪ್ರೇರೇಪಿಸುವುದು ಒಂದು ಸವಾಲೇ ಸರಿ. ಪೋಷಕರಿಲ್ಲದಂತಹ ಮಕ್ಕಳನ್ನು ಸಮೀಪದ ಹಾಸ್ಟೆಲ್ಗೆ ಸೇರಿಸಲು ಕ್ರಮ ಕೈಗೊಳ್ಳಿ ಮತ್ತು ಆ ಮಗುವಿನ ಆರ್ಥಿಕ ಪರಿಸ್ಥಿತಿಯನ್ನು ಸಮೀಕ್ಷೆ ಮಾಡುವಂತೆ ಸಿ.ಇ.ಓ. ಅವರು ಸೂಚಿಸಿದರು.