ಪ್ರಾಮಾಣಿಕ ಸರ್ಕಾರಿ ನೌಕರರಿಗೆ ಪ್ರೋತ್ಸಾಹ ಅಗತ್ಯ: ಸುಭಾಷ್ ಬಿ. ಆಡಿ
ತುಮಕೂರು: ಪ್ರಾಮಾಣಿಕ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಬೈರಪ್ಪನವರಿಗೆ ಉಪ ಲೋಕಾಯುಕ್ತ ಸುಭಾಷ್ ಬಿ. ಆಡಿ ಕರೆ ನೀಡಿದರು. ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸುಮಾರು 6 ವರೆ ಲಕ್ಷ ಸರ್ಕಾರಿ ನೌಕರರನ್ನೊಳಗೊಂಡ ದೊಡ್ಡ ಸಂಸ್ಥೆಯಾಗಿರುವ ಸರ್ಕಾರಿ ನೌಕರರ ಸಂಘ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರನ್ನು ಗುರುತಿಸಿ, ಬೆಂಬಲಕ್ಕೆ ನಿಂತರೆ ದೇಶಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು. ಸರ್ಕಾರಿ ನೌಕರರದು ಒಂದು ಸಂಘ ಅಷ್ಟೇ ಅಲ್ಲ, ಅವರದೆಲ್ಲವೂ ಒಂದೇ ಜಾತಿ. ರಾಜ್ಯದ ದೊಡ್ಡ ಸಮೂಹವಾಗಿರುವ ಸರ್ಕಾರಿ ನೌಕರರ ಸಂಘ, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು. ಶೇ.60 ರಿಂದ 70 ರಷ್ಟು ಸರ್ಕಾರಿ ನೌಕರರು ಒಳ್ಳೆಯವರೇ. ಆದರೆ ಮಿಕ್ಕ ಮಂದಿ ಮಾಡುವ ಕೃತ್ಯಗಳಿಂದ ಸಂಘಕ್ಕೆ ಸಹಜವಾಗೇ ಕೆಟ್ಟ ಹೆಸರು ಬರುತ್ತದೆ. ಬೇರೆಯವರನ್ನು ನೋಡಿ ಆಡಂಬರದ ಜೀವನಕ್ಕೆ ಜೋತು ಬೀಳದೆ, ಪ್ರಾಮಾಣಿಕವಾಗಿ ಬಾಳುವಂತೆ ಸಲಹೆ ನೀಡಿದರು. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಜಿಪಂ ಸಿಇಒ ಗೋವಿಂದರಾಜು, ಲೋಕಾಯುಕ್ತ ಎಸ್ಪಿ ರಮೇಶ್ಚಂದ್ರ ಇದ್ದರು.