ಕೇಂದ್ರದ ಅಸಡ್ಡೆ: ತೆಂಗು ಬೆಳೆಗಾರರ ಆಕ್ರೋಶ
ತಿಪಟೂರು: ತೆಂಗಿಗೆ ಹತ್ತಾರು ವರ್ಷಗಳಿಂದ ನುಸಿಪೀಡೆ, ಬೆಂಕಿರೋಗ, ರಸಸೋರುವ ರೋಗ ಸೇರಿದಂತೆ ಒಂದಲ್ಲ ಒಂದು ರೋಗಗಳು ಬಿಟ್ಟೂ ಬಿಡದೆ ಪೀಡಿಸುತ್ತಿವೆ. ತೆಂಗು ಬೆಳಗಾರರಿಗೆ ಕೇಂದ್ರ ಸರ್ಕಾರ ಯಾವುದೇ ಸೌಲಭ್ಯ ನೀಡದೆ ಅಸಡ್ಡೆಯಿಂದ ನೋಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರೈತ ಭವನದಲ್ಲಿ ಕೇಂದ್ರ ಕೃಷಿ ಸಚಿವಾಲಯದ ಕೃಷಿ ಉತ್ಪನ್ನದರ ನಿಗದಿ ಆಯೋಗದ ಸದಸ್ಯ ಡಿ.ಎಸ್. ರಘು ಅವರ ಸಮ್ಮುಖದಲ್ಲಿ ನಡೆದ ಸಂವಾದದಲ್ಲಿ ರೈತರು ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಕೇರಳ, ತಮಿಳುನಾಡಿನಂಥ ಹೊರ ರಾಜ್ಯಗಳಿಂದ ಹೆಚ್ಚು ಕೊಬ್ಬರಿ ಬರುತ್ತಿದೆ. ಆ ಕೊಬ್ಬರಿಗೂ ಸಹ ಇಲ್ಲಿಯ ಬೆಲೆ ನೀಡಿಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ತಿಪಟೂರು ಕೊಬ್ಬರಿ ಬೆಳೆಗಾರರಿಗೆ ಮೋಸವಾಗುತ್ತಿದ್ದು, ಇಲ್ಲಿಯ ಕೊಬ್ಬರಿಗೆ ವಿಶೇಷ ಮಾನ್ಯತೆ ನೀಡಿ ನ್ಯಾಯಯುತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಇಲಾಖೆ ವಿರುದ್ದ ರೈತರ ಆಕ್ರೋಶ: ತೋಟಗಳ ಅಭಿವೃದ್ಧಿಗೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆದಿದ್ದು, ಅದರ ಬಡ್ಡಿ ಕಟ್ಟಲೂ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದೇವೆ. ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಾಗಲಿ, ತೋಟಗಾರಿಕೆ ಇಲಾಖೆಯಾಗಲಿ ಯೋಜನೆಗಳ ಜಾರಿಯಲ್ಲಿ ಅಂಕಿ-ಅಂಶಗಳ ಗುರಿ ತಲುಪುವ ಮಾರ್ಗ ಹಿಡಿಯುತ್ತಿವೆಯೇ ಹೊರತು ತೆಂಗು ಬೆಳೆಗಾರರಿಗೆ ಸೂಕ್ತ ಮಾರ್ಗ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿ.ಎಸ್.ರಘು, ರೈತರ ಅಭಿಪ್ರಾಯಗಳನ್ನು ಆಯೋಗದ ಗಮನಕ್ಕೆ ತಂದು ಹಾಳಾಗಿರುವ ತೆಂಗಿನ ಮರಗಳಿಗೆ ಸಹಾಯ ಧನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಎಪಿಎಂಸಿ ಅಧ್ಯಕ್ಷ ಮಾದೀಹಳ್ಳಿ ಪ್ರಕಾಶ್, ಕಾರ್ಯದರ್ಶಿ ನ್ಯಾಮನಗೌಡ, ಕೃಷಿಕ ಸಮಾಜದ ಅಧ್ಯಕ್ಷ ದೇವರಾಜು, ತೆಂಗು ಬೆಳೆಗಾರ ಸಂಘದ ಅಧ್ಯಕ್ಷ ಸಂಗಮೇಶ್, ಮಾಜಿ ಶಾಸಕ ಬಿ.ಸಿ.ನಾಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಹಿರಿಯ ಸಹಾಯಕ ನಿರ್ದೇಶಕ ಪುಷ್ಪಲತಾ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಿ.ಎಸ್.ದೇವರಾಜು, ತಾಲೂಕು ಅಧ್ಯಕ್ಷ ಯೋಗಣ್ಣ, ತಾಲೂಕು ಸಾವಯವ ಕೃಷಿ ಅಧ್ಯಕ್ಷ ನಂಜುಂಡಪ್ಪ, ರೈತ ಮುಖಂಡರಾದ ಹರಿಸಮುದ್ರ ಗಂಗಾಧರ್, ಅಣೆಕಟ್ಟೆ ವಿಶ್ವನಾಥ್, ಬಿಳಿಗೆರೆ ನಾಗೇಶ್, ಶಂಕರಣ್ಣ, ಶರ್ಮಾ ಮತ್ತಿತರರಿದ್ದರು.