ತ್ಯಾಜ್ಯ ವಿಲೇವಾರಿ ಅವ್ಯವಸ್ಥೆ
ಶಿರಾ ಶಿವಕುಮಾರ್
ತುಮಕೂರು/ಶಿರಾ: ಇಲ್ಲಿನ ನಗರಸಭೆ ನಗರದಿಂದ ಸಂಗ್ರಹಿಸಿದ ಘನತ್ಯಾಜ್ಯವನ್ನು ಜನತೆಯ ಆರೋಗ್ಯಕ್ಕೆ ಹಾನಿಕಾರಕವಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಲ್ಲಿ ವಿಫಲವಾಗಿದೆ. ನಗರದ ಹೊರವಲಯದ ಶಿರಸ್ತೇದಾರ್ ಕಟ್ಟೆ ಸಮೀಪ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕವನ್ನು ಸ್ಥಾಪಿಸಿರುವ ಶಿರಾ ನಗರಸಭೆ ಘಟಕದ ಒಳಗೆ ಕಸ ಘನತ್ಯಾಜ್ಯವನ್ನು ಶೇಖರಣೆ ಮಾಡದೆ ಘಟಕದ ಅಕ್ಕಪಕ್ಕ ಹಾಕಿ ಸುತ್ತಮುತ್ತಲ ಪ್ರದೇಶವನ್ನು ಕಲುಷಿತಗೊಳಿಸಿದೆ.
ಈ ಘಟಕದ ಅಕ್ಕಪಕ್ಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಸರ್ಕಾರಿ ಐ.ಟಿ.ಐ. ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಬಾಲಕರ ವಸತಿ ಶಾಲೆ ಇವುಗಳ ಮಧ್ಯೆ ಸ್ಥಾಪಿತವಾಗಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಮೊದಲು ತನ್ನ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.
ಹಾರಿಕೆ ಉತ್ತರ: ಶಿರಾ ನಗರದಲ್ಲಿ ಕಸಮುಕ್ತವಾಗಿದೆ ಎಂದು ಹೇಳಿಕೊಂಡರೂ, ಮನೆಯ ಅಕ್ಕಪಕ್ಕದಲ್ಲೇ ಹಾದು ಹೋಗುವ ಚರಂಡಿಗಳಲ್ಲಿ ಗಬ್ಬುನಾರುವ ವಾಸನೆ, ಸೊಳ್ಳೆಗಳ ಕಾಟ, ಕಸದ ಕಿರಿಕಿರಿಗಿಂತ ಅಪಾಯಕಾರಿಯಾಗಿ ಪರಿಣಮಿಸಿದೆ. ನಗರದ ಸಪ್ತಗಿರಿ ಬಡಾವಣೆಯ ಹಾಗೂ ಶಿವಾಜಿ ನಗರ ಬಡಾವಣೆಯ ವಾಸಿಗಳು ಹೇಳುವಂತೆ ಅಲ್ಲಿನ ಚರಂಡಿಗಳು ಗಬ್ಬುನಾರುತ್ತಿವೆಯಂತೆ ನಗರಸಭೆಗೆ ಈ ಬಗ್ಗೆ ತಿಳಿಸಿದ್ದರೂ ಹಾರಿಕೆ ಉತ್ತರ ನೀಡುತ್ತಾರಂತೆ. ಒಟ್ಟಾರೆ ನಗರದಿಂದ ಸಂಗ್ರಹಿಸಿದ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯಬೇಕಿದೆ. ನಗರದ
ಚಿಕ್ಕ ಕೆರೆ ಮೈದಾನ ಕಸದಿಂದ ಮುಕ್ತಿಗೊಳ್ಳಬೇಕಿದೆ, ಮಧುಗಿರಿ ರಸ್ತೆ, ಕೋಟೆ ಬೀದಿ, ಗೌಳಿಗರಹಟ್ಟಿ, ಪೇಶುಮಾ ಮೊಹಲ್ಲ, ಗಾಡಿವಾನ್ ಮೊಹಲ್ಲ, ಕಚೇರಿ ಮೊಹಲ್ಲ, ಸೊಪ್ಪಿನಹಟ್ಟಿ, ಕಾಳಿದಾಸನಗರ, ರಂಗನಾಥ ನಗರ, ಕರೆಕಲ್ಲಹಟ್ಟಿ, ಮಲ್ಲಿಕಾಪುರದಹಟ್ಟಿ, ಶಿವಾಜಿನಗರ, ಸಪ್ತಗಿರಿ ಬಡಾವಣೆ ಈ ಕಡೆಗಳಲ್ಲೆಲ್ಲ ಚರಂಡಿ ಸ್ವಚ್ಚಗೊಳಿಸುವ ಪ್ರಯತ್ನ ನಡೆಯಬೇಕಿದೆ.
ಫಲ ಕಾಣದ ಯೋಜನೆ: ಕಳೆದ ವರ್ಷ ಮೈಸೂರಿನ ಜೆಎಂಎಸ್ ಬಯೋಟೆಕ್ ಅಭಿಯಂತರರು ಜೈವಿಕ ಸೂಕ್ಷ್ಮಾಣು ದ್ರಾವಣ ಸಿಂಪಡಿಸಿ, ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ್ದರು. ಆದರೆ ಅಗತ್ಯ ತೇವಾಂಶ ಕಾಪಾಡಿಕೊಳ್ಳದ ಕಾರಣ ಯೋಜನೆ ಫಲ ಕಾಣಲು ಸಾಧ್ಯವಾಗಲಿಲ್ಲ ಎನ್ನುವ ಅಧಿಕಾರಿಗಳು ಈ ಬಾರಿ ಆಳವಾದ ಗುಂಡಿ ತೆಗೆದು ಪ್ಲಾಸ್ಟಿಕ್ ಮತ್ತು ರಸಾಯನಿಕಗಳ ಹೊರತಾದ ಕಸ ತುಂಬಿ ಮತ್ತೊಮ್ಮೆ ಗೊಬ್ಬರ ತಯಾರಿಸುವುದಾಗಿ ಹೇಳುತ್ತಿದ್ದಾರೆ.
ಇದಕ್ಕಾಗಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಗ್ರಹಿಸಿದ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕದ ಹೊರವಲಯದಲ್ಲಿ ಚೆಲ್ಲಲಾಗಿದೆ. ಕೆಲವೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸ ಮತ್ತೆ ಕೆಲವೆಡೆ ರಾಶಿಯಾಗಿರುವುದನ್ನು ಕಂಡರೆ ಇದು ಕೇವಲ ಒಂದೆರಡು ದಿನದಲ್ಲಿ ಸಂಗ್ರಹಿಸಿದ ಕಸ ಅಲ್ಲ ಎನ್ನುವುದು ಮನವರಿಕೆಯಾಗುತ್ತದೆ. ಕೆಲ ಪೌರಕಾರ್ಮಿಕ ಪ್ರಕಾರ ಹೊಸ ಪ್ರಯೋಗಕ್ಕೆ ಘಟಕದ ಒಳಗಿನ ಕಸವನ್ನೇ ಹೊರಗೆ ಸಾಗಿಸಲಾಗಿದೆಯಂತೆ.
ಕೆಟ್ಟ ಪರಿಣಾಮ
ಘಟಕದ ಹೊರಗೆ ಸಂಗ್ರಹಿಸಲಾಗಿರುವ ಕಸ ಕುರಿತಂತೆ ಜಾಣ ಮೌನ ವಹಿಸಿದ್ದಾರೆ. ಮಳೆಗಾಲ ಬರುತ್ತಿದ್ದು, ಮಳೆ ನೀರಿನೊಂದಿಗೆ ಕಸದಲ್ಲಿನ ವಿಷಕಾರಿ ಅಂಶಗಳು ನೀರಿನ ಮೂಲಕ ತಗ್ಗು ಪ್ರದೇಶದಲ್ಲಿ ನಿಂತು ಕುಡಿಯುವ ದನಕರುಗಳ ಜೀವಕ್ಕೆ ಮತ್ತು ಜನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆಪಾದಿಸಿ ಸಮೀಪದ ಭೂವನಹಳ್ಳಿ ಗ್ರಾಮಸ್ಥರು ಧರಣಿ ನಡೆಸುವ ಪ್ರಯತ್ನದಲ್ಲಿದ್ದರು. ಅವರನ್ನು ಸಮಾಧಾನಗೊಳಿಸಿ ಕಳುಹಿಸಲಾಗಿದೆ ಎಂದಿರುವ ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ ತಾಂತ್ರಿಕವಾಗಿ ನನಗೆ ಸರಿಯಾಗಿ ವಿವರಗಳು ತಿಳಿದಿಲ್ಲವಾದರೂ ಶೀಘ್ರವೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನುಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಎಲ್ಲಿ ನಿರ್ವಹಣೆ?
ಮನೆಗಳಿಂದ ಕಸ ಸಂಗ್ರಹಣೆ, ಕಸ ವಿಂಗಡಣೆ, ವಿಲೇವಾರಿ ಘಟಕ ರಚನೆ-ನಿರ್ವಹಣೆ, ಲ್ಯಾಬ್, ವರ್ಮಿ ಶೆಡ್, ವಿಂಡ್ರೋ ಪ್ಲಾಟ್ ಫಾರಂ, ಸೋಲಾರ್ ವಿದ್ಯುತ್ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆಗಾಗಿ ಫೆಬ್ರವರಿ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆಗೆ ಉತ್ತಮ ನಿರ್ವಹಣೆ ಪ್ರಶಸ್ತಿ ಪತ್ರ ನೀಡಲಾಗಿತ್ತು. ಇಂದಿನ ಕಸ ನಿರ್ವಹಣೆ ನೀಡಲಾಗಿರುವ ಪ್ರಶಸ್ತಿಯನ್ನು ಅಣಕಿಸುತ್ತಿದೆ.
ಸೆಲ್, ಬ್ಯಾಟರಿ, ಸೀಸ, ಪಾದರಸ ಮೊದಲಾದ ರಸಾಯನಿಕಗಳನ್ನು ಹೊಂದಿರುವ ಪ್ರಕೃತಿಗೆ ಧಕ್ಕೆ ತರುವ ವಸ್ತುಗಳನ್ನು ಅಂತರ್ಜಲಕ್ಕೆ ಸೇರದ ರೀತಿಯಲ್ಲಿ ಆಳವಾದ ಗುಂಡಿಗಳಲ್ಲಿ ಮುಚ್ಚಲಾಗುವುದು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಮತ್ತು ಪರಿಸರ ಅಭಿಯಂತರರು ಅಭಿಪ್ರಾಯಪಟ್ಟಿದ್ದಾರೆ.