ಪಂಚಾಂಗ, ಜ್ಯೋತಿಷ್ಯದಿಂದ ದಾರಿದ್ರ್ಯ ಹೋಗಲ್ಲ: ಡಾ.ಮುರುಘಾ ಶರಣರು
ತುಮಕೂರು: ಪಂಚಾಂಗ, ಜ್ಯೋತಿಷ್ಯ ಅಮಾಯಕರಿಗಾಗಿಯೇ ಹೊರತು ಬಸವಾನುಯಾಯಿಗಳಿಗಲ್ಲ ಎಂದು ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಮಾರ್ಮಿಕವಾಗಿ ನುಡಿದರು.
ತುಮಕೂರಿನಲ್ಲಿ ಬಸವ ಕೇಂದ್ರ, ಬಸವ ಮಹಿಳಾ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಪಂಚಾಂಗ ಎಷ್ಟು ನೋಡಿದರೂ, ಜ್ಯೋತಿಷ್ಯ ಎಷ್ಟು ಕೇಳಿದರೂ ಮೂರ್ಖತನ, ಸೋಮಾರಿತನ, ದಾರಿದ್ರ್ಯ, ದುಷ್ಟತನ ಹೋಗಿಲ್ಲ, ಹೋಗಲ್ಲ. ಹೀಗಾಗಿ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ. ಇವೆಲ್ಲಾ ಇರುವುದು ಅಮಾಯಕರಿಗಾಗಿಯೇ ಹೊರತು ಬಸವಣ್ಣನ ಅನುಯಾಯಿಗಳಿಗಲ್ಲ. ಬಸವಾನುಯಾಯಿಗಳಿಗೆ ಪಂಚಾಂಗ ಮುಖ್ಯವಲ್ಲ, ಪಂಚ ಅಂಗ ಅರ್ಥಾತ್ ಪಂಚೇದ್ರಿಯಗಳು ಮುಖ್ಯ. ಇವುಗಳನ್ನು ಸರಿಯಾಗಿಟ್ಟುಕೊಳ್ಳಬೇಕು. ಇವ ನಮ್ಮವ ಎಂಬ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬಸವತತ್ವ ಜಾರಿಯಾದಂತೆಯೇ ಎಂದರು.
21ನೇ ಶತಮಾನದಲ್ಲಿ ಬಸವಾದಿ ಶರಣರನ್ನು ನೆನಪಿಸುವ ಕೆಲಸವಾಗಬೇಕು. ಅರ್ಥರಹಿತ ಆಚರಣೆಗಳನ್ನು, ಮೂಢನಂಬಿಕೆಗಳನ್ನು, ಕಂದಾಚಾರವನ್ನು ಕೈಬಿಡಬೇಕು. ಈ ಹಿನ್ನೆಲೆಯಲ್ಲಿ ತಾವು ಆಷಾಢ ಮಾಸದಲ್ಲಿ ಸಾಮೂಹಿಕ ವಿವಾಹಕ್ಕೆ ಮಠದ ವತಿಯಿಂದ ಪ್ರಕಟಣೆ ನೀಡಿದ್ದು, ಈಗಾಗಲೇ 25 ಜೋಡಿ ನೋಂದಣಿ ಮಾಡಿಸಿದ್ದಾರೆ ಎಂದರು.
ಸ್ಥಾಪಿತ ಮೌಲ್ಯಗಳ ಜತೆಗೆ ಇಂದು ಸಮಕಾಲೀನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ನಾವು ಮಾತನಾಡುತ್ತಲೇ ಬಂದಿದ್ದೇವೆ. ನಡೆಗೂ ನುಡಿಗೂ ಸಂಬಂಧವೇ ಇಲ್ಲದಂತಾಗಿದೆ. ಬಹುತೇಕ ಕಡೆ ಇಂದಿಗೂ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡದೇ ಇರುವುದು. ಗರ್ಭಗುಡಿಗೆ ಪ್ರವೇಶ ನಿರಾಕರಿಸುವುದು ಸೇರಿದಂತೆ ಇತರೆ ಕಾರ್ಯಗಳು ನಡೆದೇ ಇವೆ. ಆದರೆ ತಮ್ಮ ಮಠ ಇದಕ್ಕೆ ಹೊರತಾಗಿದೆ. ಬಸವಣ್ಣನವರ ಸಮಾನತೆಯ ಆಶಯದಂತೆ ಸ್ತ್ರೀ-ಪುರುಷ ಬೇಧ-ಭಾವ ಮಾಡದೇ ನಡೆದುಕೊಳ್ಳುತ್ತಿದೆ ಎಂದರು.
ಶರಣರ ತತ್ವಗಳನ್ನು ಮರೆತು, ಜಾತಿವಾದಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ ಎಂದರು. ಸಮಾರಂಭದಲ್ಲಿ ಡಾ.ಗೊ.ರು. ಚನ್ನಬಸಪ್ಪ, ಸಿದ್ದಗಂಗಮ್ಮ ಸಿದ್ದರಾಮಣ್ಣ ಇತರರಿದ್ದರು.