ಬುದ್ಧಿಜೀವಿಗಳು ದೇಶದ ಪೀಡೆ
ತುಮಕೂರು: ದೇಶದ ಅತಿ ದೊಡ್ಡ ಪೀಡೆಗಳೆಂದರೆ ಬುದ್ಧಿಜೀವಿಗಳು. ಸ್ವಾತಂತ್ರ್ಯ ನಂತರದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿಯಾಗಿರುವುದು ಬುದ್ಧಿಜೀವಿ ವರ್ಗವೇ. ಹಾಲಿ ದೇಶದ ಅತ್ಯಂತ ದೊಡ್ಡ ಪಿಡುಗು ಕೂಡ ಬುದ್ಧಿಜೀವಿಗಳೇ ಆಗಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಹೇಳಿದ್ದಾರೆ.
ತುಮಕೂರಿನ ಬಸವ ಕೇಂದ್ರ, ಬಸವ ಮಹಿಳಾ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಸಿದ್ದಗಂಗಾ ಕಾಲೇಜಿನ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪುರೋಹಿತ ಶಾಹಿ-ಪೂಜಾರಿ ವರ್ಗ, ರಾಜಕೀಯ ಶಾಹಿ, ಒಂದು ಹಂತದಲ್ಲಿ ಬುದ್ಧಿಜೀವಿ ವರ್ಗ ಅಪಾಯಕಾರಿಯಾಗಿವೆ. ಬುದ್ಧಿಜೀವಿಗಳು ಸಾಮಾಜಿಕ ಶಾಂತಿ ಕೆಡಿಸುವ ಹಿನ್ನೆಲೆಯಲ್ಲಿ, ಸ್ವಪ್ರತಿಷ್ಠೆಗಾಗಿ, ಕೀರ್ತಿಗಾಗಿ ಮಾತುಗಳನ್ನಾಡುತ್ತಿದೆ. ಆದರೆ ಸಮುದಾಯದ ಮೇಲಾಗುವ ಪರಿಣಾಮ ಏನಾಗುತ್ತೆ ಅನ್ನೋದರ ಕುರಿತು ಯಾವೊಬ್ಬ ಬುದ್ಧಿಜೀವಿಯೂ ಯೋಚಿಸುತ್ತಿಲ್ಲ ಎಂದರು.
ಧರ್ಮದ ಹೆಸರಲ್ಲಿ ಪುರೋಹಿತ ಶಾಹಿ, ದೇವರ ಹೆಸರಲ್ಲಿ ಪೂಜಾರಿ ವರ್ಗ, ರಾಜಕೀಯ ಶಾಹಿ ಜನಸಾಮಾನ್ಯರ ಬದುಕನ್ನು ವಿಶ್ವದೆಲ್ಲೆಡೆ ಅಸಹನೀಯವಾಗಿಸಿ, ನುಚ್ಚುನೂರು ಮಾಡಿದೆ. ಆದರೆ ಈ 3 ವರ್ಗಗಳಿಗಿಂತಲೂ ಒಂದು ಹಂತದಲ್ಲಿ ಹೆಚ್ಚು ಅಪಾಯಕಾರಿಯಾಗಿರುವುದು, ಸ್ವಾತಂತ್ರ್ಯಾ ನಂತರ ದೇಶವನ್ನು ಕಾಡಿದ, ಕಾಡುತ್ತಿರುವ ವರ್ಗವೇ ಬುದ್ಧಿಜೀವಿಗಳದ್ದು. ಆದರೆ ಯಾವೊಬ್ಬ ಬುದ್ಧಿಜೀವಿಯ ಹೆಸರನ್ನು ಪ್ರಸ್ತಾಪಿಸದೇ ಗೊರುಚ ವಾಗ್ದಾಳಿ ನಡೆಸಿದ್ದು ಗಮನಾರ್ಹವಾಗಿತ್ತು.
ಅಧಿಕಾರ, ಹಣದ ಕೈವಾಡ ಹೆಚ್ಚಾಗಿ ವಿನಯ, ಸೌಹಾರ್ದತೆ ಕಾಣುತ್ತಿಲ್ಲ. ಮನಸ್ಸಿನ ಮಾತು ಕೇಳಿ ಕೆಲಸ ಮಾಡಲಾಗುತ್ತಿದೆಯೇ ಹೊರತು ಹೃದಯದ ಮಾತನ್ನಲ್ಲ. ಪರಿಣಾಮ ದ್ವೇಷ, ಅಸೂಯೆ, ಸಣ್ಣತನಗಳು ರಾರಾಜಿಸುತ್ತಿವೆ ಎಂದರು.
ಅಮೆರಿಕವನ್ನು ಮೀರಿಸುತ್ತೇವೆ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೋಟಿ ರಾಜಕೀಯ ಪಕ್ಷಗಳು 31,941 ಖರ್ಚು ಮಾಡಿವೆ. ಚುನಾವಣಾ ಆಯೋಗದಿಂದ ಖರ್ಚಾಗಿರುವುದು 3400 ಕೋಟಿ. ಕೇವಲ 2 ತಿಂಗಳಲ್ಲೇ ವರ್ಷದ ಆದಾಯ (ಜಾಹೀರಾತು) ಮಾಧ್ಯಮಗಳಿಗೆ ಸಂದಾಯವಾಗಿದೆ. ವಿಶ್ವದ ಅತಿ ದೊಡ್ಡ ಚುನಾವಣೆ, ಖರ್ಚು ಅಮೆರಿಕದ್ದಾಗಿದ್ದು, 42 ಸಾವಿರ ಕೋಟಿಯಷ್ಟಾಗಿದೆ. ಮುಂದಿನ ಬಾರಿ ಭಾರತ ಅಮೆರಿಕವನ್ನು ಮೀರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕರ್ಮಟ, ಕಂದಾಚಾರ, ಮೌಢ್ಯತೆಯ ಅಂದಿನ ಸಮಾಜವನ್ನು ಅಧ್ಯಯನ ಮಾಡಿದ ಬಸವಣ್ಣ ಪ್ರಶ್ನಿಸಿದ. ಮನುಷ್ಯನ ಘನತೆ ಹೆಚ್ಚಿಸುವ, ಸಮಾನತೆ ತರುವ ನಿಟ್ಟಿನಲ್ಲಿ ಹೊಸ ಧರ್ಮ ಸ್ಥಾಪನೆಗೆ ಕಾರಣನಾದ. ಅನುಭವ ಮಂಟಪವೂ ಅಂದಿತ್ತು. ಪುರೋಹಿತಶಾಹಿ, ಕರ್ಮಠರ ವಿರೋಧದ ನಡುವೆಯೂ ಬಸವಣ್ಣನ ನಡೆ, ವಿಚಾರಕ್ರಾಂತಿ ಧೀರೋಧಾತ್ತವಾಗಿತ್ತು. ಇಂದು ಕೇವಲ ಬಸವ ಜಯಂತಿಯನ್ನು ಆಚರಣೆಗೆ ಸೀಮಿತ ಮಾಡದೇ ಬಸವ ತತ್ವಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ಬಸವಾನುಯಾಯಿಗಳು ಎಷ್ಟರ ಮಟ್ಟಿಗೆ ಬಸವ ತತ್ವಗಳನ್ನು ಅನುಷ್ಠಾನ ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಂವಿಧಾನ ತಿದ್ದುಪಡಿ ಅಗತ್ಯ: ದೇಶಕ್ಕೆ ತುರ್ತಾಗಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದೆ. ಚುನಾವಣಾ ನೀತಿ ಸಂಹಿತೆಯೂ ತಿದ್ದುಪಡಿಯಾಗಬೇಕಿದೆ. ಭಾರತದ ಸಂವಿಧಾನ ಅರ್ಥಪೂರ್ಣವಾಗಿದೆ. ಆದರೆ ಸೂಕ್ತ ತಿದ್ದುಪಡಿಯೊಂದಿಗೆ ಬದಲಾವಣೆಯ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾಶರಣರು, ತುಮಕೂರು ಬಸವ ಕೇಂದ್ರದ ಅಧ್ಯಕ್ಷೆ ಸಿದ್ದಗಂಗಮ್ಮ ಸಿದ್ದರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.