ಹುಳಿಯಾರಿನಲ್ಲಿ ಕಸದ ಕಾರುಬಾರು
ಡಿ.ಆರ್. ನರೇಂದ್ರಬಾಬು
ಹುಳಿಯಾರು: ಜಿಲ್ಲೆಯಲ್ಲಿ ದೊಡ್ಡ ಹೋಬಳಿ ಕೇಂದ್ರ, ತಾಲೂಕಿನ ಅರ್ಹತೆ ಹೊಂದಿದ್ದರೂ ಪಟ್ಟಣವಾಗಿರುವ ಹುಳಿಯಾರಿನಲ್ಲಿ ಕಸದ್ದೇ ಕಾರುಬಾರು ಆಗಿದ್ದು, ಪಟ್ಟಣದ ತುಂಬಾ ಕಸದ ರಾಶಿ ರಾರಾಜಿಸುತ್ತಿದೆ.
ಹದಿಮೂರು ವಾರ್ಡ್ ಹೊಂದಿ ಸುಮಾರು 17 ಸಾವಿರ ಜನ ಸಂಖ್ಯೆ ಇರುವ ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆಯಾಗಿದೆ. ಬಸ್ ನಿಲ್ದಾಣದ ಅಂಗಡಿಗಳ ಬಳಿ, ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ, ಅಜಾದ್ ನಗರ, ಕೆಂಚಾಂಬ ನಗರ ಮತ್ತಿತರ ಕಡೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ನೋಡುವವರಿಲ್ಲ.
ಕೋಳಿ ಅಂಗಡಿ, ಹೊಟೇಲ್ ಸೇರಿದಂತೆ ನೂರಾರು ಅಂಗಡಿಗಳಿಂದ ಸಂಗ್ರಹವಾಗುವ ಟನ್ ಗಟ್ಟಲೆ ಕಸ ಎಲ್ಲಂದರಲ್ಲಿ ಸುರಿಯುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ ತೆರವು ಮಾಡಲು ಪೌರಕಾರ್ಮಿಕರ ಕೊರತೆಯಿದೆ ಎನ್ನುತ್ತಾರೆ ಪಂಚಾಯ್ತಿ ಸಿಬ್ಬಂದಿ. 12 ಜನ ಲೆಕ್ಕದಲ್ಲಿದ್ದು 10 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದ ಕಾರಣ ಕೆಲವರು ಗೈರು ಆಗುತ್ತಾರೆ. ಇರುವ ಸಿಬ್ಬಂದಿಯಿಂದ ಸ್ವಚ್ಛಗೊಳಿಸಲು ಅಸಾಧ್ಯವಾಗಿದೆ. ಕಸಮುಕ್ತ ಪಟ್ಟಣಕ್ಕೆ ಪಂಚಾಯ್ತಿ ಸಿಬ್ಬಂದಿ ಕ್ರಮ ಕೈಗೊಂಡು ಸ್ವಚ್ಛತೆ ಬಗ್ಗೆ ನಾಗರಿಕರು ಕಾಳಜಿ ವಹಿಸಿದಲ್ಲಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬಹುದಾಗಿದೆ.