ಕರಡಾಳು ಘಟನೆ: ಆಯೋಗಕ್ಕೆ ದೂರು
ತುಮಕೂರು: ತಿಪಟೂರು ತಾಲೂಕು ಕರುಡಾಳು ಗ್ರಾಮದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಪ್ರಾಣ ತೆತ್ತ ಅಮಾಯಕ ಯುವ ಬಡ ರೈತ ಕಿರಣ್ ಕುಮಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಘಟನೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ರಾಜ್ಯ ಆಯೋಗ ಮಧ್ಯೆ ಪ್ರವೇಶಿಸಬೇಕೆಂದು ತುಮಕೂರಿನ ಮಾನವ ಹಕ್ಕುಗಳ ಜನಪರ ಸಂಘ ಮನವಿ ಮಾಡಿದೆ.
ಮಾನವ ಹಕ್ಕುಗಳ ಜನಪರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ. ರವೀಶ್ ನೇತೃತ್ವದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ರಿಜಿಸ್ಟರ್ ಮಲ್ಲೇಶಪ್ಪ ಅವರನ್ನು ಭೇಟಿ ಮಾಡಿ ಕಳೆದ 15 ದಿನಗಳಿಂದಲೂ ಹಲವಾರು ಸಂಘ ಸಂಸ್ಥೆಗಳು ಅನೇಕ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಆದರೆ ಇವರೆಗೂ ಜಿಲ್ಲಾಡಳಿತ ಯಾವುದೇ ಪ್ರಾಥಮಿಕ ಮಟ್ಟದ ತನಿಖೆಗೆ ಆದೇಶ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯ ತನ್ನ ಗಮನಕ್ಕೆ ಬಂದಿಲ್ಲ ಎಂಬ ಬೇಜಾವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತವು ಪ್ರಕರಣದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಿಪಟೂರಿನ ಮುಖಂಡರಾದ ಲೋಕೇಶ್ವರ್ ಅವರು 15 ದಿನಗಳಿಂದ ನಡೆದ ವಿವಿಧ ಹೋರಾಟಗಳ ವರದಿಯನ್ನು ಹಾಗೂ ಮೃತ ಯುವ ರೈತನ ಕುಟುಂಬದ ಹೀನಾಯ ಸ್ಥಿತಿಯನ್ನು ವಿವರಿಸುತ್ತಾ ತಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯೆಪ್ರವೇಶಿಸಿ ಕುಟುಂಬಕ್ಕೆ ಮೊದಲು ಸೂಕ್ತ ಪರಿಹಾರ ನೀಡಬೇಕು ನಂತರ ಸೂಕ್ತ ತನಿಖೆಯನ್ನು ನಡೆಸಿ ನ್ಯಾಯ ಒದಗಿಸಬೇಕೆಂದು ವಿನಂತಿಸಿದರು.
ಇದಕ್ಕೆ ಉತ್ತರಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ರಿಜಿಸ್ಟರ್ ಮಲ್ಲೇಶಪ್ಪ, ಸಕಾರತ್ಮಕವಾಗಿ ಸ್ವಂದಿಸಿ ಆಯೋಗವು ಈಗಾಗಲೇ ಸುಮೋ ಮೋಟೋ ಆಡಿಯಲ್ಲಿ ಫಿರ್ಯಾದು ದಾಖಲಿಸಿಕೊಂಡಿದ್ದು ಮತ್ತು ತಾವು ಈಗ ನೀಡಿದ ದೂರನ್ನು ಸಹ ಅದರೊಟ್ಟಿಗೆ ದಾಖಲಿಸಿಕೊಂಡು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ. ಶೀಘ್ರವೇ ಸ್ಥಳ ಪರಿಶೀಲನೆಗೆ ಉನ್ನತ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು. ನಿಯೋಗದಲ್ಲಿ ಹನುಮಂತರಾಜು, ವಿರೂಪಾಕ್ಷ, ರಾಜಶೇಖರ್, ಜಗದೀಶ್, ವೆಂಕಟೇಶ್ ಮೂರ್ತಿ, ಪ್ರೇಮಾ ಹೆಗ್‌ಡೆ, ಗಿರಿಜಮ್ಮ ಹಾಜರಿದ್ದರು.