ನರೇಂದ್ರ ಮೋದಿ ಜನಪ್ರಿಯತೆಗೆ ಕಾಂಗ್ರೆಸ್ ತತ್ತರ
ಕುಣಿಗಲ್: ಲೋಕಸಭೆ ಚುನಾವಣೆ ಘೋಷಣೆಯ ಮುನ್ನವೆ ನರೇಂದ್ರ ಮೋದಿ ಜನಪ್ರಿಯತೆಗೆ ತತ್ತರಿಸಿ ಹೋಗಿರುವ ಕಾಂಗ್ರೆಸ್ ಮುಖಂಡರು, ನಮೋ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡುತ್ತಾ ತಮ್ಮ ಹತಾಶ ಮನೋಭಾವ ವ್ಯಕ್ತಪಡಿಸುತ್ತಿದ್ದಾರೆಂದು ಬೆಂ.ಗ್ರಾ.ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮುನಿರಾಜು ಗೌಡ ತಿಳಿಸಿದರು. ಬುಧವಾರ, ಪಟ್ಟಣದ ನಮೋ ಅಭಿಮಾನಿಗಳು ವಾರದ ಸಂತೆ ಪ್ರಯುಕ್ತ ಗ್ರಾಮಾಂತರ ಪ್ರದೇಶದ ಜನತೆಗೆ ನರೇಂದ್ರ ಮೋದಿಯವರ ಬಗ್ಗೆ ಪ್ರಚಾರ ಮಾಡಲು ನಮೋ ಟೀ ಸ್ಟಾಲ್ ಪ್ರಾರಂಭಿಸಿದ್ದು, ಟೀಸ್ಟಾಲ್‌ಗೆ ಭೇಟಿ ನೀಡಿ, ಜನತೆಗೆ ಚಹಾ ವಿತರಿಸಿ ಮಾತನಾಡಿದ ಅವರು, ಐದು ದಶಕಗಳ ದೇಶವನ್ನಾಳಿದ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಶ್ರಮಿಸದ ಕೇವಲ ಸ್ವಾರ್ಥಪರ ಸಾಧನೆಯಿಂದ ದೇಶವನ್ನು ಅಧೋಗತಿಗೆ ತಂದಿದೆ. ಅಧಿಕಾರದಲ್ಲಿರುವಾಗಲೂ ಹಲವು ಹಗರಣಗಳಲ್ಲಿ ಮುಳುಗೇಳುತ್ತಾ, ರಾಷ್ಟ್ರದ ಜನತೆಗೆ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುವಂತೆ ಮಾಡಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದರು.