ನಿಜವಾದ ಕ್ರಾಂತಿ ಶ್ರೀ ಸಾಮಾನ್ಯನಿಂದ ಮಾತ್ರ ಸಾಧ್ಯ: ಕೆ.ಬಿ. ಸಿದ್ದಯ್ಯ
ತುಮಕೂರು: ನಿಜವಾದ ಕ್ರಾಂತಿ ಶ್ರೀ ಸಾಮಾನ್ಯನಿಂದ ಮಾತ್ರ ಸಾಧ್ಯ ಎಂದು ಕವಿ ಕೆ.ಬಿ. ಸಿದ್ದಯ್ಯ ಪ್ರತಿಪಾದಿಸಿದರು.
ಅವರು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದ್ದ ತುಮಕೂರು ತಾಲೂಕು 4 ನೇ ಸಾಹಿತ್ಯ ಸಮ್ಮೇಳನದಲ್ಲಿ ನೆಲದ ಮರೆಯ ನಿಧಾನ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಶ್ರೀ ಸಾಮಾನ್ಯ ನಮ್ಮ ನಿಮ್ಮಂತೆ ಅಕ್ಷರಸ್ಥನಲ್ಲ. ಆದರೆ ವ್ಯವಸ್ಥೆ ಬದಲಿಸಬೇಕೆಂಬ ಹುಮ್ಮಸ್ಸಿದೆ. ಮನಸ್ಸಿದೆ. ವ್ಯವಸ್ಥೆಯ ಬಗ್ಗೆ ಆಕ್ರೋಶವಿದೆ. ಶ್ರೀ ಸಾಮಾನ್ಯರು ಒಗ್ಗೂಡಿದರೆ ಕ್ರಾಂತಿ, ಬದಲಾವಣೆ ಖಂಡಿತ ಸಾಧ್ಯ ಎಂದರು.
ಕೇವಲ ಸಾಹಿತಿ, ರಾಜಕಾರಣಿಯಿಂದ ಸಮಾಜ, ದೇಶ ಬದಲಾವಣೆ ಅಗುತ್ತೆ ಅನ್ನೋದು ಸುಳ್ಳು. ಭಾರತ ಅಸಮಾನತೆಯಿಂದ, ಜಾತಿ ವ್ಯವಸ್ಥೆಯಿಂದ ಕೂಡಿದ ಪುರುಷ, ಸ್ತ್ರೀ ಅಸಮಾನತೆಯಿಂದ ಕೂಡಿದ ರೋಗಗ್ರಸ್ಥ ಸಮಾಜವಾಗಿದೆ. ಆತ್ಮಗೌರವವಿಲ್ಲದೆ ಬದುಕುವ ಸ್ಥಿತಿ ನಮ್ಮ ನಾಡಿನಲ್ಲಿದೆ. ಹೀಗಾಗಿ ಮೂಲತಃ ಜಾತ್ಯತೀತತೆಯಿಂದ ಕೂಡಿದ ನಮ್ಮ ಸಮಾಜಕ್ಕೆ ಸಾಹಿತಿ, ತತ್ವಜ್ಞಾನಿಗಳು ಜಾತ್ಯತೀತ ತತ್ವಗಳನ್ನು, ಸಮಾನತೆಯ ಬೀಜಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ. ಸ್ತ್ರೀಯರ ಮೇಲೆ ವಿಪರೀತ ಹಲ್ಲೆಗಳಾಗುತ್ತಿವೆ. ಆತ್ಮರಕ್ಷಣೆ ಮಾಡಿಕೊಳ್ಳುವುದೇ ದುಸ್ಥರವಾಗುತ್ತಿದೆ. ಮಾತಿಗೂ, ಕೃತಿಗೂ ಸಂಬಂಧವಿಲ್ಲದಂತಾಗಿದೆ. ನುಡಿದಂತೆ ನಡೆದವನೇ ಸಂತ, ಕವಿ, ಸಾಹಿತಿ, ನಿಜವಾದ ಮನುಷ್ಯ ಎಂದರು. ಕುವೆಂಪು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಪ್ರತಿಜ್ಞೆಮಾಡಿದ್ದರು. ಅದರಂತೆ ಕೊನೆವರೆಗೆ ನಡೆದುಕೊಂಡರು. ಆದರ್ಶವಾದರು. ಈ ರೀತಿಯ ಆದರ್ಶ ಪರಂಪರೆ ಇರುವ ಕನ್ನಡ ನಾಡಿನಲ್ಲಿ ಜಾತ್ಯತೀತತೆ, ಸಮಾನತೆ, ಬೋಧಿಸಿದರೆ ಸಾಲದು. ತತ್ವಗಳೊಡನೆ ದಿನನಿತ್ಯ ಬದುಕಬೇಕು. ಇದೇ ನಮ್ಮ ಪರಂಪರೆ. ಕನ್ನಡ ಪರಂಪರೆ ಎಂಬುದನ್ನು ಮರೆಯಬಾರದು ಎಂದು ಸಿದ್ದಯ್ಯ ಮಾರ್ಮಿಕವಾಗಿ ನುಡಿದರು.