ಸಾಕ್ಷಕರತೆ ಪ್ರಮಾಣ ಶೇ.100 ರಷ್ಟಾಗಲಿ
ಶಿರಾ: ಗ್ರಾಮೀಣ ಪ್ರದೇಶದ ಹಾಗೂ ಸಮಾಜದ ದುರ್ಬಲ ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಸರ್ಕಾರವೆ ಶುಲ್ಕ ಭರಿಸುವುದರಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಸಕಾರಗೊಳ್ಳಲಿದೆ. ಅಲ್ಲದೆ ದೇಶದಲ್ಲಿ ಸಾಕ್ಷಕರತೆ ಪ್ರಮಾಣ ಶೇ.100 ರಷ್ಟಾಗಬೇಕೆಂಬುದು ಆರ್ಟಿಐ ಕಾಯ್ದೆಯ ಸದುದ್ದೇಶವಾಗಿದೆ ಎಂದು ಹುಲಿಕುಂಟೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಹೇಳಿದರು. ಅವರು ಶಿರಾ ತಾಲೂಕಿನ ನಿಡಗಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹುಲಿಕುಂಟೆ, ತಡಕಲೂರು, ದೊಡ್ಡಬಾಣಗೆರೆ ಗ್ರಾಮ ಪಂಚಾಯತಿಗಳ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ನಡೆದ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಎಚ್.ಜಿ. ಮಂಜುನಾಥ್ ಮಾತನಾಡಿ ಜನಸಾಮನ್ಯರಿಗೆ ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಪೂರ್ಣ ಪ್ರಮಾಣದ ತಿಳಿವಳಿಕೆ ದೊರೆತಾಗ ಮಾತ್ರ ಸರ್ಕಾರ ನೀಡುವ ಸೌಲಭ್ಯ ಪಡೆಯಲು ಸಾಧ್ಯ ಎಂದರು.