ಅರ್ಹರಿಗೆ ಕೂಲಿ ನೀಡುವಲ್ಲಿ ವ್ಯಾಪಕ ತಾರತಮ್ಯ ಆರೋಪ
ಶಿರಾ: ತಾಲೂಕಿನಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅರ್ಹ ಕೂಲಿಕಾರರಿಗೆ ಕೂಲಿ ನೀಡುವಲ್ಲಿ ವ್ಯಾಪಕ ತಾರತಮ್ಯವನ್ನೆ ಎಸಗುತ್ತಿದು,್ದ ವಿನಾಕಾರಣ ಈ ಯೋಜನೆಯ ನೆಪದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಅಮಾನತ್ತುಗೊಳಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಅನೇಕ ಕೂಲಿ ಕಾರ್ಮಿಕರು ಹಾಗೂ ಜನಪ್ರತಿನಿಧಿಗಳು ಇಲ್ಲಿನ ತಾ.ಪಂ. ಕಚೇರಿ ಮುಂದೆ ಪ್ರಾರಂಭಿಸಿರುವ ಪ್ರತಿಭಟನೆ ಶನಿವಾರವೂ ಮುಂದುವರೆದಿದೆ.
ಶಿರಾ ತಾಲ್ಲೂಕಿನಲ್ಲಿ ವಿವಿಧ ಗ್ರಾ.ಪಂ. ಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಪ್ರಾಮಾಣಿಕವಾಗಿ ಕೂಲಿ ಕಾರ್ಯಗಳನ್ನು ಕೈಗೊಂಡು ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಜಿ.ಪಂ. ಸಿ.ಇ.ಓ. ಹಾಗೂ ಸ್ಥಳಿಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಾಮಾಣಿಕವಾಗಿ ಕೈಗೊಂಡ ಕಾಮಗಾರಿಗಳಿಗೆ ಅನುದಾನ ನೀಡದೆ ಕೂಲಿಕಾರರನ್ನು ಸತಾಯಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಈ ಭಾಗದ ಎನ್.ಆರ್.ಇ.ಜಿ. ಕಾಮಗಾರಿಗಳಿಗೆ ಅಳತೆ ಪುಸ್ತಕ ಬರೆಯಲು ಅನುಮತಿಯನ್ನು ನೀಡುತ್ತಿಲ್ಲ. ಸರಿಯಾಗಿ ಕೂಲಿಗಾರರಿಗೆ ಕೂಲಿಯ ಹಣವನ್ನೂ ವಿತರಿಸುವಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈವರೆಗೆ 8 ಕೋಟಿಗೂ ಹೆಚ್ಚು ಎನ್.ಆರ್.ಇ.ಜಿ. ಹಣ ಶಿರಾ ತಾಲೂಕಿಗೆ ಬರಬೇಕಿತ್ತು ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಭೂವನಹಳ್ಳಿಯ ಜನಾರ್ದನ್ ಆರೋಪಿಸಿದರು. ಕಾಮಗಾರಿಗಳ ಕಾರ್ಯಗಳಲ್ಲಿ ಯಾವುದೇ ರೀತಿಯ ಲೋಪವೆಸಗದ ತಡಕಲೂರು ಗ್ರಾ.ಪಂ. ಪಿ.ಡಿ.ಓ. ಹಾಗೂ ಇಬ್ಬರು ಪ್ರಾಮಾಣಿಕ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿರುವ ಜಿ.ಪಂ. ಸಿ.ಇ.ಓ. ಅವರು ಈ ಕೂಡಲೆ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾ.ಪಂ.ಗಳಿಗೂ ಬೀಗ: ಅತ್ಯಂತ ಬರಪೀಡಿತ ಪ್ರದೇಶವಾದ ಶಿರಾ ಭಾಗದಲ್ಲಿ ಖಾತರಿ ಯೋಜನೆಯಿಂದ ಕಾರ್ಮಿಕರಿಗೆ ಕೂಲಿ ಸಿಗುವಂತಾಗಿದ್ದು, ಆ ಕೂಲಿಗೂ ಕೂಡ ಜಿ.ಪಂ. ಸಿ.ಇ.ಓ. ಸಂಚಕಾರ ತಂದಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂ.ಗಳ ಅಧ್ಯಕ್ಷರು ಸದಸ್ಯರುಗಳೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಒಂದೆರಡು ದಿನಗಳಲ್ಲಿ 36 ಗ್ರಾ.ಪಂ.ಗಳಿಗೂ ಬೀಗ ಜಡಿದು ಅಧಿಕಾರಿಗಳ ದುರ್ವರ್ತನೆಯನ್ನು ಖಂಡಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಶನಿವಾರದ ಪ್ರತಿಭಟನೆಗೆ ರಾಜ್ಯ ಮಾದಿಗ ದಂಡೋರ ಸಂಘಟನೆಯು ಬೆಂಬಲ ಸೂಚಿಸಿದ್ದು ಸಂಘಟನೆಯ ಕಾರ್ಯಾಧ್ಯಕ್ಷ ಮಾಗೋಡು ಭೂತರಾಜು, ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್, ಭೂವನಹಳ್ಳಿ ಜನಾರ್ದನ್, ತಾ.ಪಂ. ಸದಸ್ಯರಾದ ಶ್ರೀನಿವಾಸ್, ರಾಘವೇಂದ್ರ, ಚಿಕ್ಕೀರೇಗೌಡ, ಲಕ್ಷ್ಮೀಸಾಗರ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಭೂವನಹಳ್ಳಿ ಗ್ರಾ.ಪಂ. ಅಧ್ಯಕ್ಷ ಹನುಮಂತರಾಯಪ್ಪ ಸೇರಿದಂತೆ ಹಲವರು ಹಾಜರಿದ್ದರು.