'ಎತ್ತಿನಹೊಳೆ ಚುನಾವಣಾ ಗಿಮಿಕ್ ಅಲ್ಲ'
ತುಮಕೂರು: ಪರಿಸರಕ್ಕೆ ಹಾನಿಯಾಗದ, ಬಯಲುಸೀಮೆ ಬವಣೆ ನೀಗಿಸುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುವುದು ಅನಿವಾರ್ಯ, ಖಚಿತ. ಇದು ಚುನಾವಣಾ ಗಿಮಿಕ್ ಅಲ್ಲವೇ ಅಲ್ಲ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ತುಮಕೂರು ಗ್ರಾಮಾಂತರ ತಾಲೂಕಿನ ಹೊನ್ನುಡಿಕೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಮಾತ್ರ ತುಮಕೂರು ಜಿಲ್ಲೆಗೆ ನೀರು ಹರಿಸಲು ಸಾಧ್ಯ. ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳ ಅನುಷ್ಠಾನಕ್ಕೆ ರಾಜಕಾರಣಿಗಳು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಒಂದುಗೂಡಬೇಕಿದೆ ಎಂದರು.
ನೇತ್ರಾವತಿ ತಿರುವು ಯೋಜನೆಗೂ, ಎತ್ತಿನಹೊಳೆ ಯೋಜನೆಗೂ ಯಾವುದೇ ಸಂಬಂಧವಿಲ್ಲ. ನೇತ್ರಾವತಿ ತಿರುವು ಯೋಜನೆ ಎಂಬುದು ಇಲ್ಲವೇ ಇಲ್ಲ. ಈ ಹಿಂದೆ ನಾವು ಗುಂಡ್ಯ-ವೇದಾವತಿ ಯೋಜನೆಯ ಬಗ್ಗೆ ಯೋಜನೆ ರೂಪಿಸಿ ಕೇಂದ್ರದಿಂದಲೂ ಒಪ್ಪಿಗೆ ಪಡೆದಿದ್ದೆವು. ಆದರೆ ಅದು ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ.
ಆದರೆ, ಎತ್ತಿನಹೊಳೆ ಯೋಜನೆಯ ಬಗ್ಗೆ ಚಿಂತನೆ ನಡೆಸಿ ಅದನ್ನು ರೂಪಿಸಿದ್ದೇ ನಾನು. ಈ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಒಪ್ಪಿಗೆಯೂ ದೊರೆತಿದೆ. ಈ ಯೋಜನೆಯಲ್ಲಿ 24 ಟಿಎಂಸಿಯಷ್ಟು ನೀರು ದೊರೆಯುತ್ತದೆ.
ಪರಿಸರದ ಮೇಲೆ ಯಾವುದೇ ಹಾನಿಯಾಗದು. ಆದರೂ ಕೆಲವು ಸ್ವಹಿತಾಸಕ್ತ ವ್ಯಕ್ತಿಗಳು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಈ ಯೋಜನೆಯ ಕಾಲುವೆ ಹೇಮಾವತಿ ನಾಲೆಗಿಂತ ಮೇಲ್ಮಟ್ಟದಲ್ಲಿ ಹೋಗುವುದರಿಂದ ಅಗತ್ಯ ಬಿದ್ದರೆ ಅಲ್ಲಿನ ನೀರನ್ನೂ ಹೇಮಾವತಿ ನಾಲೆಗೂ ಹರಿಸಬಹುದು ಎಂದರು.
ಈ ಯೋಜನೆಯ ಭೂಮಿ ಪೂಜೆಗೆ ಹಲವು ಅಡ್ಡಿ ಆತಂಕಗಳು ಎದುರಾಗುತ್ತಿವೆ. ಈಗಾಗಲೇ ಡಿಪಿಆರ್ ಮಾಡಲು 2639 ಕೋಟಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ನೀರಾವರಿ ಯೋಜನೆಗಳ ಬಗ್ಗೆ ವಿನಾ ಕಾರಣ ಟೀಕೆ ಮಾಡುವವರ ಬಗ್ಗೆ ಜನತೆ ಎಚ್ಚರ ವಹಿಸಬೇಕಿದೆ. ಎತ್ತಿನಹೊಳೆ ಯೋಜನೆ ಚುನಾವಣಾ ಗಿಮಿಕ್ ಅಲ್ಲ ಎಂದರು.